ರೋಹಿಂಗ್ಯಾ ಹೋರಾಟಗಾರರಿಂದ ಕದನವಿರಾಮ ಘೋಷಣೆ
ಮ್ಯಾನ್ಮಾರ್,ಸೆ.10: ಸೇನೆಯ ಹಿಂಸಾಚಾರಕ್ಕೆ ಬೆದರಿ ಮ್ಯಾನ್ಮಾರ್‌ನಿಂದ ಮೂರು ಲಕ್ಷಕ್ಕೂ ಅಧಿಕ ರೋಹಿಂಗ್ಯನ್ನರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವಂತೆಯೇ ರೋಹಿಂಗ್ಯಾ ಹೋರಾಟಗಾರರು ಒಂದು ತಿಂಗಳವರೆಗೆ ಏಕಪಕ್ಷೀಯ ಕದನವಿರಾಮವನ್ನು ಘೋಷಿಸಿದ್ದಾರೆ.
ಮ್ಯಾನ್ಮಾರ್ ಹಿಂಸಾಚಾರದಿಂದ ಸಂತ್ರಸ್ತರಾಗಿರುವ ರೋಹಿಂಗ್ಯಾ ನಾಗರಿಕರಿಗೆ ಆಹಾರ ಹಾಗೂ ನೆರವು ಸಾಮಗ್ರಿಗಳು ಪೂರೈಕೆಯಾಗುವ ಉದ್ದೇಶದಿಂದ ಕದನ ವಿರಾಮ ಘೋಷಿಸಿರುವುದಾಗಿ ಅರಾಕಾನ್ ರೋಹಿಂಗ್ಯಾ ವಿಮೋಚನಾ ಸೇನೆ (ಎಆರ್‌ಎಸ್‌ಎ) ಘೋಷಿಸಿದೆ.
ಮಾನವೀಯ ನೆಲೆಯಲ್ಲಿ ತಾನು ನೀಡಿರುವ ಕದನವಿರಾಮದ ಕೊಡುಗೆಗೆ ಮ್ಯಾನ್ಮಾರ್ ಸೂಕ್ತವಾಗಿ ಪ್ರತಿಕ್ರಿಯಿಸುವಂತೆಯೂ ಅದು ಕರೆ ನೀಡಿದೆ. ಮಾನವೀಯ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲಾ ಸಂಸ್ಥೆಗಳು ಜನಾಂಗೀಯ ಅಥವಾ ಧಾರ್ಮಿಕ ಹಿನ್ನೆಲೆಯನ್ನು ಪರಿಗಣಿಸದೆ, ಈ ಗಂಭೀರ ಮಾನವೀಯ ಬಿಕ್ಕಟ್ಟಿನ ಎಲ್ಲಾ ಸಂತ್ರಸ್ತರಿಗೂ ನೆರವನ್ನು ಒದಗಿಸಬೇಕೆಂದು ಅದು ಮನವಿ ಮಾಡಿದೆ.
ಶನಿವಾರ ಮ್ಯಾನ್ಮಾರ್ ಆಡಳಿತವು ಪ್ರತ್ಯೇಕ ಹೇಳಿಕೆಯೊಂದನ್ನು ನೀಡಿ, ರೋಹಿಂಗ್ಯಾ ಬಹುಸಂಖ್ಯಾತ ಪ್ರದೇಶಗಳಲ್ಲಿ ಮೂರು ಪರಿಹಾರ ಶಿಬಿರಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ.
ರಾಖ್ನೆ ಪ್ರಾಂತದಲ್ಲಿ ಮ್ಯಾನ್ಮಾರ್ ಸೇನೆ ಹಾಗೂ ಬೌದ್ಧ ತೀವ್ರವಾದಿಗಳು ರೋಹಿಂಗ್ಯನ್ನರ ಗ್ರಾಮಗಳ ಮೇಲೆ ದಾಳಿಯನ್ನು ಮುಂದುವರಿಸಿದ್ದು, ಅಂತಾರಾಷ್ಟ್ರೀಯ ನೆರವು ಕಾರ್ಯಕ್ರಮಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.
ಈ ಮಧ್ಯೆ ರೋಹಿಂಗ್ಯಾ ಹೋರಾಟಗಾರರ ಕದನವಿರಾಮದ ಕೊಡುಗೆಯನ್ನು ಬಾಂಗ್ಲಾದೇಶದ ರೆಡ್‌ಕ್ರಾಸ್ ಸಂಸ್ಥೆಯು ಸ್ವಾಗತಿಸಿದೆ.
ಕದನವಿರಾಮ ತಿರಸ್ಕರಿಸಿದ ಮ್ಯಾನ್ಮಾರ್ ಸೇನೆ
ಹಿಂಸಾಚಾರದಿಂದ ತತ್ತರಿಸಿರುವ ರಾಖ್ನೆ ರಾಜ್ಯದಲ್ಲಿ ನಿರಾಶ್ರಿತರಾಗಿರುವ ಸಾವಿರಾರು ಮಂದಿಗೆ ಆಹಾರ ಹಾಗೂ ನೆರವು ಸಾಮಗ್ರಿಗಳ ಪೂರೈಕೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ರೋಹಿಂಗ್ಯಾ ಹೋರಾಟಗಾರರು ಘೋಷಿಸಿರುವ ಕದನವಿರಾಮದ ಕೊಡುಗೆಯನ್ನು ಮ್ಯಾನ್ಮಾರ್ ಸೇನೆ ರವಿವಾರ ತಿರಸ್ಕರಿಸಿದೆ.
ಮ್ಯಾನ್ಮಾರ್‌ನ ರಾಖ್ನೆ ಪ್ರಾಂತದಿಂದ ಭುಗಿಲೆದ್ದ ಹಿಂಸಾಚಾರದ ಬಳಿಕ ನೆರೆಯ ರಾಷ್ಟ್ರವಾದ ಬಾಂಗ್ಲಾದ ಕಾಕ್ಸ್‌ಬಝಾರ್ ಪ್ರಾಂತಕ್ಕೆ ಪಲಾಯನಗೈದಿರುವ ರೋಹಿಂಗ್ಯನ್ನರ ಸಂಖ್ಯೆ ಈಗ 2.94 ಲಕ್ಷಕ್ಕೇರಿರುವುದಾಗಿ ವಿಶ್ವಸಂಸ್ಥೆಯ ನಿರಾಶ್ರಿತರಿಗಾಗಿನ ಸಂಸ್ಥೆ ವರದಿ ಮಾಡಿದೆ. ರಾಖ್ನೆ ಪ್ರಾಂತದ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಸಹಸ್ರಾರು ರೋಹಿಂಗ್ಯನ್ನರು ವಸತಿ ಹಾಗೂ ಆಹಾರವಿಲ್ಲದೆ ಶೋಚನೀಯ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇನ್ನು ಕೆಲವರು ಪ್ರಾಣವನ್ನೇ ಒತ್ತೆಯಿಟ್ಟುಕೊಂಡು ಪರ್ವತಗಳು, ದಟ್ಟವಾದ ಪೊದೆಗಳು ಹಾಗೂ ಗದ್ದೆಗಳನ್ನು ದಾಟಿ ಬಾಂಗ್ಲಾವನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ.