ಗುರ್ಗಾಂವ್ ನಲ್ಲಿ ಶಾಲಾ ಬಾಲಕನ ಹತ್ಯೆ: ಕೇಂದ್ರ ಸರಕಾರ, ಸಿಬಿಎಸ್‌ಇ, ಸಿಬಿಐಗೆ ಸುಪ್ರೀಂ ನೋಟಿಸ್
ಹೊಸದಿಲ್ಲಿ, ಸೆ. 11: ಹರ್ಯಾಣದ ಗುರ್ಗಾಂವ್‌ನ ರ್ಯಾನ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನಡೆದ 7 ವರ್ಷದ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸೋಮವಾರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಹರ್ಯಾಣ ಡಿಜಿಪಿ, ಸಿಬಿಐ ಹಾಗೂ ಸಿಬಿಎಸ್‌ಇಗೆ ನೊಟೀಸು ಜಾರಿ ಮಾಡಿದೆ.
ಕೆಲವು ದಿನಗಳ ಹಿಂದೆ ಗುರ್ಗಾಂವ್ ಶಾಲೆಯಲ್ಲಿ ನಡೆದ 7 ವರ್ಷದ ಬಾಲಕನ ಹತ್ಯೆ ಉಲ್ಲೇಖಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ, ದೇಶಾದ್ಯಂತ ಎಲ್ಲ ಮಕ್ಕಳ ಸುರಕ್ಷೆ ಹಿನ್ನೆಲೆಯಲ್ಲಿ ಇದು ಕಳವಳಕಾರಿ ಘಟನೆ ಎಂದಿದ್ದಾರೆ.
ಹತ್ಯೆ ಬಗ್ಗೆ ಶೀಘ್ರ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಬಾಲಕನ ತಂದೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಬಾಲಕನ ತಂದೆ ಪರವಾಗಿ ದಾವೆ ಸಲ್ಲಿಸಿರುವ ನ್ಯಾಯವಾದಿ ಕಮಲೇಶ್ ಮಿಶ್ರಾ, ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಹಾಗೂ ಮಕ್ಕಳ ಸುರಕ್ಷೆಗೆ ಶಾಲೆ ಉತ್ತರದಾಯಿಯಾಗಲು ಮಾರ್ಗಸೂಚಿ ರೂಪಿಸಬೇಕು. ಶಾಲೆಯ ಆವರಣದಲ್ಲಿ ನಡೆದ ಹತ್ಯೆಯ ಬಾಧ್ಯತೆಯನ್ನು ಶಾಲೆಯ ಆಡಳಿತ ಮಂಡಳಿ ಹೊರಬೇಕು ಎಂದಿದ್ದಾರೆ. ಬಾಲಕ ಕೆಳಗೆ ಬಿದ್ದು ಮೃತಪಟ್ಟ ಎಂದು ರ್ಯಾನ್ ಇಂಟರ್‌ನ್ಯಾಷನಲ್ ಶಾಲೆಯ ಆಡಳಿತ ಮಂಡಳಿ ಹೆತ್ತವರಿಗೆ ತಿಳಿಸಿರುವುದಾಗಿ ವರದಿಯೊಂದು ಹೇಳಿದೆ. ಆದರೆ, ಬಾಲಕನ ದೇಹದಲ್ಲಿ ಚಾಕುವಿನಿಂದ ಇರಿದ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಮೂರ್ತಿ ಎಂ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಹರ್ಯಾಣ ಡಿಜಿಪಿ, ಸಿಬಿಐ ಹಾಗೂ ಸಿಬಿಎಸ್‌ಇಗೆ ನೋಟಿಸು ಜಾರಿ ಮಾಡಿದೆ.
ಮೂರು ವಾರಗಳಲ್ಲಿ ಈ ನೋಟಿಸ್‌ಗೆ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ನಾವು ಈ ವಿಚಾರಣೆಯನ್ನು ಕೇವಲ ಒಂದು ಶಾಲೆಗೆ ಮಾತ್ರ ಸೀಮಿತಗೊಳಿಸಲಾರೆವು. ಈ ವಿಚಾರಣೆ ಹಾಗೂ ನಿರ್ಧಾರ ದೇಶಾದ್ಯಂತ ಪರಿಣಾಮ ಬೀರಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರಾ ಹೇಳಿದ್ದಾರೆ.