ನಿರ್ಬಂಧ ಹೇರಿದಲ್ಲಿ ಅಮೆರಿಕ ಭಾರೀ ಬೆಲೆ ತೆರಬೇಕಾದೀತು: ಉತ್ತರ ಕೊರಿಯ ಎಚ್ಚರಿಕೆ
ಟೋಕಿಯೊ, ಸೆ.11: ತನ್ನ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸುವ ಅಮೆರಿಕ ಬೆಂಬಲಿತ ಪ್ರಸ್ತಾಪವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಂಗೀಕರಿಸಿದಲ್ಲಿ, ಅದಕ್ಕಾಗಿ ಅಮೆರಿಕವು ಭಾರೀ ಬೆಲೆಯನ್ನು ತೆರಬೇಕಾಗುವಂತೆ ತಾನು ಮಾಡುವುದಾಗಿ ಉತ್ತರ ಕೊರಿಯ ಹೇಳಿದೆ.
ಭದ್ರತಾ ಮಂಡಳಿಯಲ್ಲಿ ತನ್ನ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸುವ ಕುರಿತಂತೆ ಅಮೆರಿಕ ಇಟ್ಟಿರುವ ನಡೆಗಳನ್ನು ತಾನು ನಿಕಟವಾಗಿ ಗಮನಿಸುತ್ತಿರುವುದಾಗಿ ಉತ್ತರ ಕೊರಿಯದ ವಿದೇಶಾಂಗ ಸಚಿವಾಲಯವು ಸೋಮವಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ ಹಾಗೂ ಈ ನಿರ್ಬಂಧಗಳ ವಿರುದ್ಧ ತನ್ನದೇ ಆದ ಕ್ರಮಗಳೊಂದಿಗೆ ಪ್ರತಿಕ್ರಿಯಿಸಲು ಸಿದ್ಧವಾಗಿರುವುದಾಗಿ ಹೇಳಿದೆ.
ಅಮೆರಿಕವು ಉತ್ತರ ಕೊರಿಯದ ನ್ಯಾಯಬದ್ಧವಾದ ಆತ್ಮರಕ್ಷಣೆಯ ಕ್ರಮಗಳನ್ನು ನೆಪವಾಗಿ ಬಳಸಿಕೊಂಡು ಆ ದೇಶದ ಕತ್ತುಹಿಸುಕಿ,ಸಂಪೂರ್ಣವಾಗಿ ಉಸಿರುಗಟ್ಟಿಸಲು ಬಳಸಿ ಕೊಳ್ಳುತ್ತಿದೆಯೆಂದು ಹೇಳಿಕೆಯು ತಿಳಿಸಿದೆ.
ಅಣ್ವಸ್ತ್ರ ಶಕ್ತ ರಾಷ್ಟ್ರವಾಗಿ ಉತ್ತರ ಕೊರಿಯದ ಪ್ರಗತಿಯನ್ನು ಹಿಮ್ಮುಖಗೊಳಿಸುವ ಕೆಟ್ಟ ಕನಸನ್ನು ಕಾಣುತ್ತಿರುವ ಅಮೆರಿಕವು ತನ್ನ ರಕ್ತಪಿಪಾಸು ಸ್ವಭಾವವನ್ನು ತೋರಿಸಲಾರಂಭಿಸಿದೆ’’ ಎಂದು ಅದ ಉತ್ತರ ಕೊರಿಯದ ವಿದೇಶಾಂಗ ಇಲಾಖೆಯ ತನ್ನ ಹೇಳಿಕೆಯಲ್ಲಿ ಕಿಡಿಕಾರಿದೆ.
ಉತ್ತರ ಕೊರಿಯವು ಅಣ್ವಸ್ತ್ರ ಹಾಗೂ ಕ್ಷಿಪಣಿ ಪರೀಕ್ಷೆಗಳನ್ನು ನಿರಂತರವಾಗಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಉತ್ತರ ಕೊರಿಯ ಸರಕಾರ ಹಾಗೂ ಅದರ ನಾಯಕ ಕಿಮ್ ಜೊಂಗ್ ಉನ್ ಅವರ ವಿದೇಶಿ ಆಸ್ತಿಗಳ ಮುಟ್ಟುಗೋಲು,ತೈಲ ಹಾಗೂ ನೈಸರ್ಗಿಕ ಅನಿಲ ರಫ್ತು ನಿಷೇಧ ಸೇರಿದಂತೆ ಆ ದೇಶದ ವಿರುದ್ದ ಅತ್ಯಂತ ಕಠಿಣ ನಿರ್ಬಂಧಗಳನ್ನು ವಿಧಿಸುವ ಕರಡು ನಿರ್ಣಯವನ್ನು ಅಮೆರಿಕವು ವಿಶ್ವಸಂಸ್ಥೆಯ ಭದ್ರತಾಮಂಡಳಿಯ ಪ್ರಸ್ತಾವನೆಗೆ ಸಲ್ಲಿಸಿದೆ.
ಆದಾಗ್ಯೂ ಕರಡು ನಿರ್ಣಯದ ವಿಚಾರವಾಗಿ ಸದಸ್ಯ ರಾಷ್ಟ್ರಗಳಾದ ಚೀನಾ ಹಾಗೂ ಅಮೆರಿಕವು ರವಿವಾರ ರಾತ್ರಿಯವರೆಗೂ ಮಾತುಕತೆಗಳನ್ನು ನಡೆಸಿರುವುದಾಗಿ ಭದ್ರತಾಮಂಡಳಿಯ ರಾಜತಾಂತ್ರಿಕ ಮೂಲಗಳು ತಿಳಿಸಿವೆ.