ದ್ವೇಷ ಸಾಧಕರ ಹಾಗೂ ಸಂಪ್ರದಾಯವಾದಿಗಳ ವಿರುದ್ಧ ಧ್ವನಿ ಎತ್ತಿದ್ದ ಗೌರಿ
ಜೆನೆವಾ, ಸೆ.11: ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಪತ್ರಕರ್ತೆ ಗೌರಿ ಲಂಕೇಶ್ ದ್ವೇಷಸಾಧಕರ ಹಾಗೂ ಸಂಪ್ರದಾಯವಾದಿಗಳ ವಿರುದ್ಧ ನಿರಂತರವಾಗಿ ದಣಿವರಿಯದೆ ಧ್ವನಿ ಎತ್ತಿದವರು ಎಂದು ವಿಶ್ವಸಂಸ್ಥೆಯ ಮಾನವಹಕ್ಕು ಸಮಿತಿಯ ಹೈಕಮಿಶನರ್ ಝೈದ್ ಅಲ್ ಹಸ್ಸನ್ ಶ್ಲಾಘಿಸಿದ್ದಾರೆ. ಇಲ್ಲಿ ಆರಂಭವಾದ ಮಾನವಹಕ್ಕುಗಳ ಸಮಿತಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುವವರನ್ನು ಬೆದರಿಸಲಾಗುತ್ತಿದೆ ಎಂದ ಅವರು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣದಿಂದ ಹಾಗೂ ಗುಂಪು ಹಲ್ಲೆಯನ್ನು ಖಂಡಿಸಿ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಆಗ್ರಹಿಸಿ ಭಾರತದ 12 ನಗರಗಳಲ್ಲಿ ನಡೆದಿರುವ ರ್ಯಾಲಿಗಳನ್ನು ಕಂಡು ಹೃದಯ ತುಂಬಿ ಬಂದಿದೆ ಎಂದರು.
ರೊಹಿಂಗ್ಯರ ಗಡೀಪಾರು-ಭಾರತದ ಕ್ರಮಕ್ಕೆ ಆಕ್ಷೇಪ :
ರೊಹಿಂಗ್ಯ ಮುಸ್ಲಿಮರನ್ನು ಸಾಮೂಹಿಕವಾಗಿ ಗಡೀಪಾರು ನಡೆಸುವ ಅಥವಾ ಅವರ ಜೀವಕ್ಕೆ ಅಪಾಯವಿರುವ ಯಾವುದೇ ಸ್ಥಳಕ್ಕೆ ಅವರನ್ನು ಮರಳಿಸುವ ಯತ್ನವನ್ನು ಭಾರತ ಕೈಗೊಳ್ಳುವಂತಿಲ್ಲ ಎಂದು ಎಂದು ವಿಶ್ವಸಂಸ್ಥೆಯ ಮಾನವಹಕ್ಕು ವಿಭಾಗದ ಹೈಕಮಿಶನರ್ ಝೈದ್ ಅಲ್ ಹಸ್ಸನ್ ತಿಳಿಸಿದ್ದಾರೆ.
ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯ ಮುಸ್ಲಿಮರ ವಿರುದ್ಧ ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಮ್ಯಾನ್ಮಾರ್‌ಗೆ ಗಡೀಪಾರು ಮಾಡಲು ಭಾರತ ಕೈಗೊಂಡಿರುವ ಕ್ರಮದಿಂದ ವ್ಯಥೆಯಾಗಿದೆ ಎಂದು ಝೈದ್ ಅಲ್ ಹಸ್ಸನ್ ತಿಳಿಸಿದ್ದಾರೆ. ಭಾರತದಲ್ಲಿ ಸುಮಾರು 40,000 ರೊಹಿಂಗ್ಯರು ನೆಲೆಸಿದ್ದು ಅವರಲ್ಲಿ 16,000 ಮಂದಿ ನಿರಾಶ್ರಿತರ ಗುರುತುಕಾರ್ಡ್ ಪಡೆದಿದ್ದಾರೆ ಎಂದವರು ತಿಳಿಸಿದ್ದಾರೆ.
ನಿರಾಶ್ರಿತರ ಕುರಿತಾದ ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲದ ಕಾರಣ ಈ ವಿಷಯದ ಬಗ್ಗೆ ಇರುವ ಅಂತಾರಾಷ್ಟ್ರೀಯ ಕಾನೂನಿನಿಂದ ಭಾರತಕ್ಕೆ ವಿನಾಯಿತಿ ಇದೆ ಎಂದು ಭಾರತದ ಗೃಹ ಸಚಿವಾಲಯದ ಸಹಾಯಕ ಸಚಿವರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ . ಆದರೆ ಅಂತಾರಾಷ್ಟ್ರೀಯ ಕಾನೂನಿಗೆ ಭಾರತ ಕೂಡಾ ಬಾಧ್ಯವಾಗಿರುವ ಕಾರಣ ಭಾರತವು ರೊಹಿಂಗ್ಯ ನಿರಾಶ್ರಿತರ ಸಾಮೂಹಿಕ ಗಡೀಪಾರು ಅಥವಾ ಅವರ ಜೀವಕ್ಕೆ ಅಪಾಯ ಇರುವ, ಹಿಂಸೆಗೆ ಒಳಗಾಗುವ ಸಾಧ್ಯತೆ ಇರುವ ಯಾವುದೇ ಪ್ರದೇಶಕ್ಕೆ ಅವರನ್ನು ಮರಳಿಸುವಂತಿಲ್ಲ ಎಂದು ಹಸ್ಸನ್ ಹೇಳಿದರು.
ಬೌದ್ಧ ಧರ್ಮೀಯರೇ ಅಧಿಕಸಂಖ್ಯೆಯಲ್ಲಿರುವ ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯ ಮುಸ್ಲಿಮ್ ಸಮುದಾಯಕ್ಕೆ ಪೌರತ್ವ ನಿರಾಕರಿಸಲಾಗಿದ್ದು ಅವರ ವಿರುದ್ಧ ತಾರತಮ್ಯದ ಧೋರಣೆ ತೋರಲಾಗುತ್ತಿದೆ. ಇದರಿಂದ ರೊಚ್ಚಿಗೆದ್ದ ರೊಹಿಂಗ್ಯ ಉಗ್ರಗಾಮಿಗಳು ಕಳೆದ ಆಗಸ್ಟ್ 25ರಂದು ಮ್ಯಾನ್ಮಾರ್ ಭದ್ರತಾ ಪಡೆಗಳ ಮೇಲೆ ಆಕ್ರಮಣ ನಡೆಸಿದ ಬಳಿಕ ಸೇನಾಪಡೆಗಳು ನಡೆಸಿದ ಪ್ರತೀಕಾರ ಕ್ರಮದಿಂದ ಕಂಗೆಟ್ಟಿರುವ ರೊಹಿಂಗ್ಯ ಮಸ್ಲಿಮರು ಸಾಮೂಹಿಕವಾಗಿ ನೆರೆಯ ದೇಶಗಳಾದ ಬಾಂಗ್ಲಾ, ಭಾರತ ಇತ್ಯಾದಿ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ ಈ ದೇಶಗಳೂ ರೊಹಿಂಗ್ಯರಿಗೆ ಆಶ್ರಯ ನೀಡಲು ನಿರಾಕರಿಸುತ್ತಿರುವ ಕಾರಣ ಇವರು ಅಸಹಾಯಕರಾಗಿದ್ದು ಊಟ, ನಿದ್ದೆ, ಆಶ್ರಯವಿಲ್ಲದೆ ನಿಶ್ಯಕ್ತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.