ಪಾಕ್ ನೆಲದಿಂದ ನಡೆಯುತ್ತಿರುವ ಗಡಿಯಾಚೆಯ ಭಯೋತ್ಪಾದನೆಯೇ ಕಾಶ್ಮೀರ ಸಮಸ್ಯೆಗೆ ಮೂಲ ಕಾರಣ

Update: 2017-09-13 15:17 GMT

ವಿಶ್ವಸಂಸ್ಥೆ, ಸೆ. 13: ಪಾಕಿಸ್ತಾನದ ನೆಲದಿಂದ ನಡೆಯುತ್ತಿರುವ ಭಯೋತ್ಪಾದನೆಯು ಕಾಶ್ಮೀರದ ಇಂದಿನ ಸ್ಥಿತಿಗೆ ಮೂಲ ಕಾರಣವಾಗಿದೆ ಹಾಗೂ ಅದು ಪಾಕ್ ಆಕ್ರಮಿತ ಕಾಶ್ಮೀರದ ಜನರನ್ನೂ ಬಲಿಪಶುಗಳನ್ನಾಗಿಸಿದೆ ಎಂದು ಜಿನೇವದಲ್ಲಿ ಮಂಗಳವಾರ ನಡೆದ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ (ಯುಎನ್‌ಎಚ್‌ಆರ್‌ಸಿ)ಯ ಅಧಿವೇಶನದಲ್ಲಿ ಭಾರತ ಹೇಳಿದೆ.

ಅಧಿವೇಶನದಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವ ಇಸ್ಲಾಮಾಬಾದ್‌ನ ಪ್ರಯತ್ನಗಳನ್ನು ವಿರೋಧಿಸುತ್ತಾ ಭಾರತ ಈ ಮಾತುಗಳನ್ನು ಹೇಳಿದೆ.

‘‘ಜಮ್ಮು ಮತ್ತು ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನ ಭಯೋತ್ಪಾದನೆಯನ್ನು ಸರಕಾರಿ ನೀತಿಯನ್ನಾಗಿ ಮಾಡಿದ್ದರೂ, ಅದು ಭಾರತದ ಸಮಗ್ರ ಹಾಗೂ ಬೇರ್ಪಡಿಸಲಾಗದ ಭಾಗವಾಗಿದೆ ಹಾಗೂ ಯಾವಾಗಲೂ ಇದೇ ರೀತಿ ಉಳಿಯುತ್ತದೆ’’ ಎಂದು ಜಿನೇವ ವಿಶ್ವಸಂಸ್ಥೆಯ ಕಚೇರಿಯಲ್ಲಿ ಭಾರತದ ರಾಯಭಾರಿಯಾಗಿರುವ ಸುಮಿತ್ ಸೇಠ್ ಹೇಳಿದರು.

ಭಾರತದ ವಿರುದ್ಧ ಪಾಕಿಸ್ತಾನ ಮಾಡಿರುವ ಆರೋಪಗಳಿಗೆ ಉತ್ತರಿಸುವ ಹಕ್ಕನ್ನು ಚಲಾಯಿಸಿದ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

‘‘ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸಕ್ತ ನೆಲೆಸಿರುವ ಸ್ಥಿತಿಯು ಪಾಕಿಸ್ತಾನದ ನೆಲದಿಂದ ನಿರಂತರವಾಗಿ ನಡೆಯುತ್ತಿರುವ ಗಡಿಯಾಚೆಯ ಭಯೋತ್ಪಾದನೆಯ ನೇರ ಫಲವಾಗಿದೆ’’ ಎಂದು ಸೇಠ್ ನುಡಿದರು.

‘‘ಭಾರತೀಯ ಭದ್ರತಾ ಪಡೆಗಳು ಅನುಭವಿಸುತ್ತಿರುವ ಹೆಚ್ಚಿನ ಸಂಖ್ಯೆಯ ಸಾವು ನೋವುಗಳು, ಈ ಕಠಿಣ ಪರಿಸ್ಥಿತಿಯಲ್ಲಿ ಅವುಗಳು ತೋರಿಸುತ್ತಿರುವ ಅಗಾಧ ಪ್ರಮಾಣದ ಸಂಯಮವನ್ನು ತೋರಿಸುತ್ತವೆ’’ ಎಂದರು.

ಭಾರತ, ಪಾಕ್‌ಗೆ ಮಾನವಹಕ್ಕುಗಳ ಕಮಿಶನರ್ ಟೀಕೆ

ಜಿನೇವದಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿ ಫಾರೂಖ್ ಅಮಿಲ್ ಕಾಶ್ಮೀರ ವಿಷಯವನ್ನು ಪಸ್ತಾಪಿಸಿದರು. ಜಮ್ಮು ಮತ್ತು ಕಾಶ್ಮೀರ ಹಾಗೂ ಪಾಕ್ ಆಕ್ರಮಿತ ಕಾಶ್ಮೀರಗಳಿಗೆ ಸತ್ಯ ಶೋಧನಾ ತಂಡಗಳ ಭೇಟಿಗೆ ಅವಕಾಶ ನೀಡದಿರುವ ಭಾರತ ಮತ್ತು ಪಾಕಿಸ್ತಾನಗಳನ್ನು ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಮಿಶನರ್ ಝಯೀದ್ ರಆದ್ ಅಲ್-ಹುಸೈನ್ ಟೀಕಿಸಿರುವುದಕ್ಕೆ ಅಮಿಲ್ ಆಕ್ಷೇಪ ವ್ಯಕ್ತಪಡಿಸಿದರು.

ಮಾನವಹಕ್ಕು ಉಲ್ಲಂಘನೆಗಳು ಭಾರತದ ರಾಜ್ಯದಿಂದ ಆಗುತ್ತಿದೆಯೇ ಹೊರತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿಲ್ಲ ಎಂದು ಅವರು ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News