ಭಟ್ಕಳದಲ್ಲಿ ಬೆಂಕಿ ಹಚ್ಚಿಕೊಂಡು ವ್ಯಾಪಾರಿ ಆತ್ಮಹತ್ಯೆಗೆ ಯತ್ನ

Update: 2017-09-14 06:54 GMT

ಭಟ್ಕಳ, ಸೆ.14: ಭಟ್ಕಳ ಪುರಸಭೆ ವ್ಯಾಪ್ತಿಯ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾದ ವೇಳೆ ವ್ಯಾಪಾರಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ಘಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಉದ್ವಿಗ್ವ ವಾತಾವರಣ ನಿರ್ಮಾಣವಾಗಿದೆ.

ಪುರಸಭೆ ಅಧೀನದ ಇಲ್ಲಿನ ಅಂಗಡಿಯೊಂದರ ಮಾಲಕ ರಾಮಚಂದ್ರ ನಾಯ್ಕ ಅಸರಕ್ಕೇರಿ ಆತ್ಮಹತ್ಯೆ ಯತ್ನಿಸಿ ಗಂಭೀರ ಗಾಯಗೊಂಡಿರುವ ವ್ಯಾಪಾರಿಯಾಗಿದ್ದಾರೆ. ಇದೇ ವೇಳೆ ರಾಮಚಂದ್ರ ನಾಯ್ಕರನ್ನು ರಕ್ಷಿಸಲೆತ್ನಿಸಿದ ಅವರ ತಮ್ಮ ಈಶ್ವರ ನಾಯ್ಕ ಕೂಡಾ ಗಾಯಗೊಂಡಿದ್ದು, ಅವರಿಬ್ಬರನ್ನೂ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಗಡಿಗಳ ತೆರವು ಕ್ರಮವನ್ನು ವಿರೋಧಿಸಿ ಹಾಗೂ ರಾಮಚಂದ್ರ ನಾಯ್ಕರ ಆತ್ಮಹತ್ಯೆ ಯತ್ನವನ್ನು ಖಂಡಿಸಿ ನಗರದಲ್ಲಿ ವ್ಯಾಪಾರಿಗಳು ಬಂದ್ ಮಾಡಿದ್ದಾರೆ. ಕೆಲವೆಡೆ ಟಯರ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಕಲ್ಲು ತೂರಾಟ ಕೂಡಾ ನಡೆದಿದೆ ಎಂದು ತಿಳಿದುಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ನಗರದ ಶಾಲಾ-ಕಾಲೇಜುಗಳಿಗೆ ರಜೆ ಸಾರಲಾಗಿದೆ.

ನಗರದಲ್ಲಿರುವ ಭಟ್ಕಳ ಪುರಸಭಾ ಅಧೀನದ 106 ಮಳಿಗೆಗಳು ಇತ್ತೀಚೆಗೆ ಹರಾಜಾಗಿತ್ತು. ಈ ಪೈಕಿ ಹರಾಜು ಆಗಿದ್ದರೂ ತೆರವುಗೊಳಿಸಲು ಒಪ್ಪದ 34 ಅಂಗಡಿಗಳನ್ನು ತೆರವುಗೊಳಿಸಲು ನಿಗದಿಪಡಿಸಿದ್ದ ಅವಧಿ ಮುಗಿದಿದ್ದ ಕಾರಣ ಅವುಗಳನ್ನು ತೆರವುಗೊಳಿಸಲು ಇಂದು ಪುರಸಭಾ ಅಧಿಕಾರಿಗಳು ಆಗಮಿಸಿದ್ದರು. ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಅಂಗಡಿಗಳನ್ನು ತೆರವುಗೊಳಿಸಲು ಪುರಸಭಾ ಮುಖ್ಯಾಧಿಕಾರಿಯ ನೇತೃತ್ವದಲ್ಲಿ ತಂಡವು ಆಗಮಿಸಿತ್ತು. ಪೊಲೀಸ್ ರಕ್ಷಣೆಯೊಂದಿಗೆ ಆಗಮಿಸಿದ ತಂಡ ತೆರವು ಕಾರ್ಯಾಚರಣೆಗೆ ಸಿದ್ಧವಾಗುತ್ತಿತ್ತು. ಈ ವೇಳೆ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ ರಾಮಚಂದ್ರ ನಾಯ್ಕ ಅಸರಕ್ಕೇರಿ ಒಮ್ಮೆಲೆ ಮೈಗೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪರಿಸರದ ಅಂಗಡಿಗಳು ಮುಚ್ಚಲ್ಪಟ್ಟಿವೆ. ಕಲ್ಲು ತೂರಾಟ ಕೂಡಾ ನಡೆದಿದೆ. ಪರಿಸ್ಥಿತಿಯ ಹಿನ್ನೆಲೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಸಾರಲಾಗಿದೆ.

ಘಟನೆಯ ಹಿನ್ನೆಲೆ: ನಗರದಲ್ಲಿರುವ ಪುರಸಭೆಗೆ ಸೇರಿದ ಒಟ್ಟೂ 106 ಮಳಿಗೆಗಳ ಹರಾಜು 2016ಈ ಅಗಸ್ಟ್ ನಲ್ಲಿ ನಡೆದಿತ್ತು. ಇದರಲ್ಲಿ ಅಂಗಡಿಗಳನ್ನು ಕಳೆದುಕೊಂಡ ಅಂಗಡಿ ಮಾಲಕರು ನ್ಯಾಯ ಕೋರಿ ಭಟ್ಕಳ ನ್ಯಾಯಲಯದಲ್ಲಿ ದಾವೆ ಹೂಡಿದ್ದರು. ಈ ನಡುವೆ ಪುರಸಭೆಯ ಹರಾಜಿನಲ್ಲಿ ಭಾಗವಹಿಸದ 34 ಅಂಗಡಿಗಳನ್ನು ತೆರವು ಮಾಡಲು ಸೆ.5ರಂದು ಬೆಳಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಭಿಯಂತರ ಆರ್.ಪಿ.ನಾಯ್ಕ ನೇತೃತ್ವದ ತಂಡ ಮುಂದಾಗಿತ್ತು. ಈ ವೇಳೆ ವ್ಯಾಪಾರಿಗಳು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಂಗಡಿಗಳನ್ನು ತೆರವುಗೊಳಿಸದ ಅಧಿಕಾರಿಗಳು ಸ್ವಯಂ ತೆರವಿಗೆ ಅಂಗಡಿಗಳ ಮಾಲಕರಿಗೆ 5 ದಿನಗಳ ಗಡುವು ವಿಧಿಸಿ ಹಿಂದಿರುಗಿದ್ದರು. ಅದರಂತೆ ಇಂದು ಮತ್ತೆ ತೆರವು ಕಾರ್ಯಾಚರಣೆಗೆ ಮುಂದಾದಾಗ ಈ ಘಟನೆ ನಡೆದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News