ಉಡುಪಿಯಲ್ಲಿ ಮುಂಬೈಯ ಅಲಾರೆ ಗೋವಿಂದ ತಂಡದಿಂದ ಮೊಸರು ಕುಡಿಕೆ

Update: 2017-09-14 08:16 GMT

ಉಡುಪಿ, ಸೆ.14: ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕಿದಿಯೂರು ಉದಯ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ನ ಕೆ.ಉದಯ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಮುಂಬೈಯ ಅಲಾರೆ ಗೋವಿಂದ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಬಾಲಮಿತ್ರ ವ್ಯಾಯಾಮ ಶಾಲೆಯ ಪುರುಷರ ತಂಡದಿಂದ ಇಂದು ಹಮ್ಮಿಕೊಳ್ಳಲಾದ ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಠದ ರಾಜಾಂಗಣದಲ್ಲಿ ಮೊಸರು ಕುಡಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಅನ್ನದಾನ ಶ್ರೀಕೃಷ್ಣನಿಗೆ ಅತ್ಯಂತ ಪ್ರೀತಿಯ ಸೇವೆ. ವಿವಿಧ ರೀತಿಯ ಸೇವೆಯಿಂದ ಭಗವಂತನಿಗೆ ತೃಪ್ತಿ ದೊರೆಯಲಿದೆ. ಇದರಿಂದ ಲೋಕ ಕಲ್ಯಾಣ ಸಾಧ್ಯ. ಈ ನಿಟ್ಟಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ ಎಂದರು.

 ಈ ಸಂದರ್ಭದಲ್ಲಿ ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ಸುಪ್ರಸಾದ್ ಶೆಟ್ಟಿ, ವಿಲಾಸ್ ನಾಯಕ್, ಶಂಭು ಶೆಟ್ಟಿ, ಬಿ.ಎನ್.ಶಂಕರ ಪೂಜಾರಿ, ಹರಿಯಪ್ಪ ಕೋಟ್ಯಾನ್, ನಟ ಸಚಿನ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ರಾಜಾಂಗಣ ಪಾರ್ಕಿಂಗ್‌ನಲ್ಲಿ ಕ್ರೇನ್ ಮೂಲಕ ಸುಮಾರು 20 ಅಡಿ ಎತ್ತರದಲ್ಲಿ ಮೊಸರು ತುಂಬಿದ ಮಡಕೆಯನ್ನು ಇರಿಸಲಾಗಿತ್ತು. ಇದನ್ನು ಬಾಲಮಿತ್ರ ವ್ಯಾಯಾಮ ಶಾಲೆಯ ಪುರುಷರ ತಂಡ ಮಾನವ ಪಿರಮಿಡ್ ರಚಿಸಿ ಒಡೆಯಿತು. ಎರಡು ಬಾರಿ ಪ್ರಯತ್ನಿಸಿದ ತಂಡ ಮೂರನೆ ಬಾರಿಯ ಯತ್ನದಲ್ಲಿ ಯಶಸ್ವಿ ಸಾಧಿಸಿತು. ಈ ವಿಶಿಷ್ಟ ಮೊಸರು ಕುಡಿಕೆ ವೀಕ್ಷಿಸಿ ಜನಸ್ತೋಮವೇ ನೆರೆದಿತ್ತು.

ಈ ತಂಡದಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಅಂಬಲಪಾಡಿಯ ಶ್ಯಾಮಿಲಿ ಸಭಾಭವನದ ಎದುರು, ಮಲ್ಪೆ ಬಸ್ ನಿಲ್ದಾಣ, ಬ್ರಹ್ಮಾವರ ಬಸ್ ನಿಲ್ದಾಣ, ಕಲ್ಯಾಣಪುರ ಸಂತೆಕಟ್ಟೆ ಜಂಕ್ಷನ್, ಉಡುಪಿ ರಥಬೀದಿ, ಕೆ.ಎಂ. ಮಾರ್ಗ, ಹೊಟೇಲ್ ಕಿದಿಯೂರು ಎದುರು ಮೊಸರು ಕುಡಿಕೆ ಕಾರ್ಯಕ್ರಮ ನಡೆಯಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News