ಬಾಲಕನೊಬ್ಬ ಪುಟ್ಟ ಕೈಗಳನ್ನು ಚಾಚಿ ಸಹಾಯಕ್ಕಾಗಿ ಕೂಗುವುದನ್ನು ನಾನು ನೋಡಿದೆ: ಪ್ರತ್ಯಕ್ಷದರ್ಶಿಯ ಹೇಳಿಕೆ

Update: 2017-09-14 12:04 GMT

ಕೌಲಾಲಂಪುರ್, ಸೆ.14: ಇಲ್ಲಿನ ಇಸ್ಲಾಮಿಕ್ ಶಾಲೆಯೊಂದರ ಹಾಸ್ಟೆಲ್ ನಲ್ಲಿ ಬೆಂಕಿ ವ್ಯಾಪಿಸಿದ ಕಾರಣ ಅಲ್ಲಿನ ಕೋಣೆಗಳಲ್ಲಿ ಬಂಧಿಯಾದ ಹಲವಾರು ಮಕ್ಕಳು ಸೇರಿದಂತೆ 24 ಮಂದಿ ಬಲಿಯಾದ ಇಂದಿನ ಘಟನೆ ಮನಕಲಕುವಂತಹದ್ದು. ಕಟ್ಟಡದಿಂದ ಹೊರಬರುವ ಎರಡನೇ ದ್ವಾರದ ನಡುವೆ ಇದ್ದ ಗೋಡೆಯೊಂದು ಇಲ್ಲದೇ ಇರುತ್ತಿದ್ದರೆ ಇಷ್ಟೊಂದು ಪ್ರಾಣನಷ್ಟವಾಗುತ್ತಿರಲಿಲ್ಲವೆಂದು ಸರಕಾರಿ ಅಧಿಕಾರಿಯೊಬ್ಬರು ಹೇಳುತ್ತಾರೆ.

ಹುಡುಗರು ಸಹಾಯಕ್ಕಾಗಿ ಬೊಬ್ಬಿಡುತ್ತಿರುವಾಗ ನೆರೆಹೊರೆಯವರು ಅಸಹಾಯಕರಾಗಿ ಅವರತ್ತ ನೋಡುತ್ತಿರುವ ದೃಶ್ಯ ಹಾಗೂ ನಂತರ ಸುಟ್ಟು ಕರಕಲಾದ ದೇಹಗಳು ಕೋಣೆಯೊಂದರ ಮೂಲೆಯಲ್ಲಿ ಬಿದ್ದಿರುವುದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಘಟನೆಯ ಪ್ರತ್ಯಕ್ಷ ಸಾಕ್ಷಿಗಳು ಕಂಡು ಕಂಗಾಲಾಗಿದ್ದಾರೆ. ಶಾಲೆಯ ಉದ್ಯೋಗಿ ಆರಿಫ್ ಮಾವರ್ಡಿ ಅವರ ಪ್ರಕಾರ ಬೆಳಗ್ಗೆ ಎದ್ದಾಗ ಗಾಳಿಮಳೆ ಬೀಸುತ್ತಿದೆಯೆಂದು ಮೊದಲು ಅಂದುಕೊಂಡರೂ ನಂತರ ಜನರ  ಕಿರುಚಾಟ ಅದೆಂದು ಅವರಿಗೆ ಅರಿವಾಗಿತ್ತು.

ಮೂರು ಮಹಡಿಯ ಕಟ್ಟಡದ ಮೇಲಿನ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ದಳಕ್ಕೆ ಒಂದು ಗಂಟೆಯೇ ಬೇಕಾಗಿತ್ತು. "ಬೆಳಿಗ್ಗೆ 5:41ಕ್ಕೆ ದಳಕ್ಕೆ ಬೆಂಕಿ ಅವಘಡದ ಸುದ್ದಿ ಮುಟ್ಟಿತ್ತು. ಕಟ್ಟಡದಲ್ಲಿ 13ರಿಂದ 17ರ ಹರೆಯದ 22 ಹುಡುಗರ ಹಾಗೂ ಇಬ್ಬರು ಶಿಕ್ಷಕರ ಸುಟ್ಟ ದೇಹಗಳು ಪತ್ತೆಯಾಗಿವೆ. ಅವರು ದಟ್ಟ ಹೊಗೆಗೆ ಉಸಿರುಗಟ್ಟಿ ಸತ್ತಿರಬೇಕೆಂದು ನಾವಂದುಕೊಂಡಿದ್ದೆವು. ಆದರೆ ಅವರ ದೇಹಗಳು, ಸಂಪೂರ್ಣ ಕರಕಲಾಗಿವೆ'' ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವರೊಬ್ಬರು ತಿಳಿಸಿದ್ದಾರೆ.

ಶಾಲೆಯಲ್ಲಿದ್ದ 14 ಮಂದಿ ಇತರ ವಿದ್ಯಾರ್ಥಿಗಳು ಹಾಗೂ ನಾಲ್ಕು ಮಂದಿ ಶಿಕ್ಷಕರನ್ನು ರಕ್ಷಿಸಲಾಗಿದ್ದರೆ ಅವರಲ್ಲಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಕಟ್ಟಡದ  ಎಲ್ಲಾ ಕಿಟಕಿಗಳಿಗೂ ಸರಳುಗಳಿದ್ದುದರಿಂದ ಒಳಗಿದ್ದ ವಿದ್ಯಾರ್ಥಿಗಳಿಗೆ ಹೊರಗೆ ಬರಲು ಬೇರೆ ದಾರಿಯಿರಲಿಲ್ಲ. ಬೆಂಕಿಗೆ ಕಾರಣವೇನೆಂದು ತಿಳಿಯುವ ಪ್ರಯತ್ನಗಳು ಮುಂದುವರಿದಿದ್ದು, ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದೆಂದು ಅಂದಾಜಿಸಲಾಗಿದೆ.

"ಬಾಲಕನೊಬ್ಬನ ಪುಟ್ಟ ಕೈಗಳು ಕಿಟಕಿಗಳಿಂದ ಹೊರಕ್ಕೆ ಚಾಚಿ ಸಹಾಯಕ್ಕಾಗಿ ಕೂಗುವುದನ್ನು ನಾನು ನೋಡಿದೆ. ಅವರ ಅಳು ಕೇಳಿದರೂ ನಾನು ಏನೂ ಮಾಡುವ ಹಾಗಿರಲಿಲ್ಲ'' ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು. ಕಳೆದೊಂದು ವರ್ಷದಿಂದ ಈ ಶಾಲೆ ಈ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದೆ.
ಶಾಲೆಯ ಮೂಲ ನಕ್ಷೆಯಂತೆ  ಮೇಲಿನ ಮಹಡಿ ತೆರೆದ ಪ್ರದೇಶವಾಗಿ ಎರಡು ಹೊರಕ್ಕೆ ಹೋಗುವ ಮೆಟ್ಟಿಲುಗಳಿರಬೇಕಾಗಿದ್ದರೂ ಆ ಮಹಡಿಗೆ ಹೋಗುವ ಹಾದಿಗೆ ಒಂದು ಗೋಡೆಯನ್ನು ಅಡ್ಡ ಕಟ್ಟಲಾದ ಪರಿಣಾಮ ಬಾಲಕರಿದ್ದ ಕಟ್ಟಡದ ಸ್ಥಳಕ್ಕೆ ಒಂದೇ ಹೊರ ಹೋಗುವ ದ್ವಾರವಿತ್ತು, ಎಂದು ಮಲೇಷ್ಯಾದ ನಗರ ಕಲ್ಯಾಣ ಸಚಿವ ನೋಹ್ ಒಮರ್ ಹೇಳಿದ್ದಾರೆ.

ಶಾಲೆ ಅಗ್ನಿ ಸುರಕ್ಷಾ ಪರ್ಮಿಟ್ ಗೆ ಅರ್ಜಿ ಸಲ್ಲಿಸಿದ್ದರೂ ಅದಕ್ಕೆ ಅನುಮತಿ ನೀಡಲಾಗಿರಲಿಲ್ಲ ಎಂದು ಅವರು ತಿಳಿಸಿದರು. ಬೆಂಕಿ ದುರಂತಕ್ಕೆ ತುತ್ತಾದ ದಾರುಲ್ ಖುರಾನ್ ಇತ್ತಿಫಾಖಿಯಾಹ್ ಒಂದು ಖಾಸಗಿ ಇಸ್ಲಾಮಿಕ್ ಸೆಂಟರ್ ಆಗಿದ್ದು ಅದು ತಹ್ಫೀಝ್ ಶಾಲೆ ಎಂದೇ ಜನಜನಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News