ರಾ.ಹೆದ್ದಾರಿ ದುರಸ್ತಿಗಾಗಿ ರಸ್ತೆಯಲ್ಲೇ ಅರೆಬೆತ್ತಲೆ ಉರುಳು ಸೇವೆ!

Update: 2017-09-15 06:51 GMT

ಉಡುಪಿ, ಸೆ.15: ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾ ನಂದ ಒಳಕಾಡು ಮಣಿಪಾಲ ಟೈಗರ್ ಸರ್ಕಲ್‌ನ ರಸ್ತೆಯಲ್ಲಿ ಇಂದು ಬೆಳಗ್ಗೆ ಅರೆ ಬೆತ್ತಲೆಯಾಗಿ ಉರುಳು ಸೇವೆ ಮಾಡುವ ಮೂಲಕ ವಿನೂತನ ಧರಣಿ ನಡೆಸಿದರು.

ಕೆಲ ತಿಂಗಳ ಹಿಂದೆ ಸಂಪೂರ್ಣ ಹೊಂಡಮಯವಾಗಿ ಈಜುಕೊಳದಂತಾಗಿದ್ದ ಮಣಿಪಾಲದ ಈ ಹೆದ್ದಾರಿಯಲ್ಲಿ ನಿತ್ಯಾನಂದ ಒಳಕಾಡು ಈಜಾಡುವ ಮೂಲಕ ಸರಕಾರದ ಗಮನವನ್ನು ಸೆಳೆದಿದ್ದರು. ನಂತರ ಅಧಿಕಾರಿಗಳು ಈ ಹೆದ್ದಾರಿಯ ಹೊಂಡಗಳಿಗೆ ತೇಪೆ ಹಚ್ಚುವ ಕೆಲಸ ಮಾಡಿದ್ದರು. ಇದೀಗ ಹೆದ್ದಾರಿ ಸಂಪೂರ್ಣ ಹದಗೆಟ್ಟು ಧೂಳುಮಯವಾಗಿದ್ದು, ವಾಹನ ಸಂಚಾರಕ್ಕೆ ಅಯೊಗ್ಯ ವಾಗಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಈ ವಿನೂತನವಾಗಿ ಧರಣಿ ನಡೆಸಿದವು.

ನಿತ್ಯಾನಂದ ಒಳಕಾಡು ಅರೆ ಬೆತ್ತಲೆಯಾಗಿ ಹೊಂಡಮಯ ಹಾಗೂ ಧೂಳುಮಯವಾಗಿರುವ ಹೆದ್ದಾರಿಯಲ್ಲೇ ಸುಮಾರು 200 ಮೀಟರ್‌ನಷ್ಟು ಉದ್ದ ಉರುಳು ಸೇವೆಯನ್ನು ಮಾಡಿದರು. ಇದೇ ವೇಳೆ ಸ್ಟಕ್ಚರ್‌ನಲ್ಲಿ ವೆಂಟಿಲೇಟರ್ ನೊಂದಿಗೆ ಗಂಭೀರ ಸ್ಥಿತಿಯಲ್ಲಿ ಮಲಗಿ್ದ ರೋಗಿಯೊಬ್ಬರ ಅಣಕು ಪ್ರದರ್ಶನವನ್ನು ನಡೆಸಲಾಯಿತು. ಕೂಡಲೇ ಹೆದ್ದಾರಿ ದುರಸ್ತಿ ಮಾಡುವಂತೆ ಧರಣಿನಿರತರು 

ಸರಕಾರವನ್ನು ಒತ್ತಾಯಿಸಿದರು. ಚಿಟ್ಪಾಡಿಯ ಜಗ್ಗು, ಕಿಶನ್, ಆನಂದ ಡೋಲು, ಚಂಡೆ ಬಾರಿಸಿ ಸಹಕರಿಸಿದರು. ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳು ಜೊತೆಗಿದ್ದರು.

‘ಧೂಳುಮಯವಾಗಿರುವ ಈ ರಸ್ತೆಯಿಂದ ಜನತೆ ಸಂಪೂರ್ಣ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಮತ್ತು ಶ್ವಾಸ ಕೋಶಕ್ಕೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗುವ ಭೀತಿಯನ್ನು ಎದುರಿಸುತ್ತಿದ್ದಾರೆ. ಮೃತ್ಯುವಿಗೆ ಆಹ್ವಾನ ನೀಡುವ ರಸ್ತೆ ಇದಾಗಿದೆ. ಆದರೂ ಸರಕಾರ ಹಾಗೂ ಜನಪ್ರತಿನಿಧಿಗಳು ಕಣ್ಣು ಮಚ್ಚಿ ಕುಳಿತಿದ್ದಾರೆ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಈ ಹೆದ್ದಾರಿಯನ್ನು ದುರಸ್ತಿ ಪಡಿಸದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ನಿತ್ಯಾನಂದ ಒಳಕಾಡು ಎಚ್ಚರಿಕೆ ನೀಡಿದರು.

ಮಣಿಪಾಲ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮುದ್ದು ಮೂಲ್ಯ ಮಾತನಾಡಿ, ಎಂಐಟಿಯಿಂದ ಸಿಂಡಿಕೇಟ್ ಸರ್ಕಲ್ ವರೆಗಿನ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ. ಈ ರಸ್ತೆಯಲ್ಲಿ ಪ್ರತೀದಿನ ಸಂಚರಿಸುವ ರಿಕ್ಷಾ ಚಾಲಕರು ನರಕಮಯ ಸ್ಥಿತಿ ಅನುಭವಿಸುತ್ತಿದ್ದಾರೆ. ಹಲವು ಕಾಯಿಲೆಗಳಿಗೆ ಚಾಲಕರು ತುತ್ತಾಗುತ್ತಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಮಣಿಪಾಲಕ್ಕೆ ಹೊರಗಡೆ ಯಿಂದ ಬರುವ ಗಣ್ಯರು ರಸ್ತೆ ನೋಡಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದು ನಮಗೆ ನಾಚಿಗೇಡು ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಪರ್ಕಳ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಸುಧಾಕರ ಪೂಜಾರಿ, ಮಣಿಪಾಲ ಟ್ಯಾಕ್ಸಿ ಮಾಲಕರ ಸಂಘದ ಅಧ್ಯಕ್ಷ ಜಯಕರ, ಜೆಸಿಐಯ ಮನೋಜ್ ಕಡಬ, ರಾಘವೇಂದ್ರ ಕರ್ವಾಲು, ಸಮಾಜ ಸೇವಕ ತಾರನಾಥ ಮೇಸ್ತ, ಹನುಮಂತ ಐಹೊಳೆ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News