ಮಂಗಳೂರಿನ ಟ್ರಾಫಿಕ್ ನಿಯಂತ್ರಣಕ್ಕೆ ಹೆಚ್ಚಿನ ಸಿಬ್ಬಂದಿ ನೇಮಕ: ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್

Update: 2017-09-15 10:33 GMT

ಮಂಗಳೂರು, ಸೆ.15: ನಗರದಲ್ಲಿ ಸಂಚಾರ ಸಮಸ್ಯೆ ಕುರಿತಂತೆ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾಕಷ್ಟು ದೂರುಗಳು ಬರುತ್ತಿರುವುದರಿಂದ ಇಲಾಖೆಗೆ ಹೊಸತಾಗಿ ನೇಮಕವಾದ ಸಿಬ್ಬಂದಿಯಲ್ಲಿ ಹೆಚ್ಚಿನವರನ್ನು ಟ್ರಾಫಿಕ್‌ಗೆ ನೇಮಕ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದ್ದಾರೆ.

ಇಂದು ತಮ್ಮ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದ ಸಂದರ್ಭ ಸಾರ್ವಜನಿಕರೊಬ್ಬರ ಅಹವಾಲಿಗೆ ಅವರು ಈ ಪ್ರತಿಕ್ರಿಯೆ ನೀಡಿದರು. ಹಂಪನಕಟ್ಟೆ ಜಂಕ್ಷನ್ ಸುತ್ತಮುತ್ತ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿರುವ ದೂರಿಗೆ ಪ್ರತಿಕ್ರಿಯಿಸಿದ ಅವರು, ಬಸ್ ತಂಗುದಾಣವನ್ನು ಸ್ಟೇಟ್‌ಬ್ಯಾಂಕ್‌ನಿಂದ ಪಂಪ್‌ವೆಲ್‌ಗೆ ಸ್ಥಳಾಂತರ ಪ್ರಸ್ತಾವವಿದೆ. ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಚಿಂತಿಸುತ್ತಿದೆ ಎಂದರು.

ಕೊಟ್ಟಾರ ಚೌಕಿಯಲ್ಲಿ ರಸ್ತೆಯಲ್ಲೇ ಬಸ್ಸುಗಳನ್ನು ನಿಲ್ಲಿಸುತ್ತಿದ್ದು, ಸಿಸಿಟಿವಿ ಕ್ಯಾಮರಾ ಅಳವಡಿಸುವುದು ಸೂಕ್ತ ಎಂದು ಸಾರ್ವಜನಿಕರೊಬ್ಬರು ಸಲಹೆ ನೀಡಿದರು. ಪಡೀಲ್-ಮರೋಳಿ ಸೇರಿದಂತೆ ಕೆಲವು ರೂಟ್‌ನಲ್ಲಿ ಕೆಲವು ಬಸ್‌ನವರು ಬೆಳಗ್ಗೆ ಮತ್ತು ಸಂಜೆ ಮಾತ್ರ ಬಂದು ಮಧ್ಯೆ ಟ್ರಿಪ್ ಕಡಿತಗೊಳಿಸುತ್ತಾರೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ದೂರು ಕೇಳಿಬಂತು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಇಂತಹ ಬಸ್‌ಗಳ ವಿರುದ್ಧ ಕಂಟ್ರೋಲ್ ರೂಂಗೆ ದೂರು ನೀಡಿದರೆ ತಕ್ಷಣ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬಸ್ಸುಗಳಲ್ಲಿ ಟಿಕೆಟ್ ಮಿಶನ್ ಅಳವಡಿಕೆ ಬಗ್ಗೆ ಕಾರ್ಯಾಚರಣೆ
ನಗರದ ಕೆಲವೆಡೆ ಸಂಚರಿಸುವ ಖಾಸಗಿ ಸಿಟಿ ಬಸ್ಸುಗಳಲ್ಲಿ ಟಿಕೆಟ್ ಸಮರ್ಪಕವಾಗಿ ನೀಡುತ್ತಿಲ್ಲ. ಇದರಿಂದ ಕಚೇರಿಗಳಲ್ಲಿ ಪ್ರಯಾಣ ಭತ್ತೆ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಆಯುಕ್ತ ಟಿ.ಆರ್. ಸುರೇಶ್ ಪ್ರತಿಕ್ರಿಯಿಸಿ, ಹಲವು ಸಮಯದಿಂದ ಬಸ್‌ನವರು ಟಿಕೆಟ್ ನೀಡದಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ. ಟಿಕೆಟ್ ಮೆಷಿನ್ ಅಳವಡಿಕೆ ಸಮಯ ನೀಡಲಾಗಿತ್ತು. ಈಗಾಗಲೇ ಅವಧಿ ಮುಗಿದಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿಂದ ಇನ್ನು ಕಾರ್ಯಾಚರಣೆ ಅನಿವಾರ್ಯ. ಈ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸರೊಂದಿಗೆ ಸಿವಿಲ್ ಪೊಲೀಸರು ಶನಿವಾರದಿಂದಲೇ ಕಾರ್ಯಾಚರಣೆ ಕೈಗೊಂಡು ಸಂಬಂಧಿತ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಪ್ರಾರ್ಥನಾ ಮಂದಿರಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಹೊತ್ತು ಧ್ವನಿವರ್ಧಕಗಳನ್ನು ಕರ್ಕಶವಾಗಿ ಇಡುವುದರಿಂದ ಸುತ್ತಮುತ್ತಲಿನ ಮನೆಯವರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ದಯವಿಟ್ಟು ಎಲ್ಲ ಪ್ರಾರ್ಥನಾ ಮಂದಿರಗಳಿಗೆ ಸೂಚನೆ ನೀಡಬೇಕೆಂದು ಸಾರ್ವಜನಿಕರೊಬ್ಬರು ಒತ್ತಾಯಿಸಿದರು.

ಇದಕ್ಕೆ ಪೊಲೀಸ್ ಕಮಿಷನರ್ ಉತ್ತರಿಸಿದಸಿ, ಪ್ರಾರ್ಥನಾ ಮಂದಿರದ ಒಳಗೆ ಕೇಳುವಂತೆ ಮಾತ್ರವೇ ಧ್ವನಿವರ್ಧಕ ಮಾತ್ರ ಬಳಸುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಂಬಂಧಪಟ್ಟವರು ಗಮನಿಸಬೇಕು ಎಂದು ಮನವಿ ಮಾಡಿದರು.

ನಂತೂರು ಜಂಕ್ಷನ್‌ನಿಂದ ಕದ್ರಿ ಬರುವ ರಸ್ತೆಯಲ್ಲಿ ಅಪಘಾತ ತಡೆಯಲು ಹಂಪ್ ಹೆಚ್ಚಿಸಬೇಕು, ವಾಮಂಜೂರಿನಲ್ಲಿ ಆರ್‌ಟಿಒ ಟೆಸ್ಟಿಂಗ್ ಟ್ರ್ಯಾಕ್ ಸುಧಾರಣೆ ಮಾಡಬೇಕು, ಮಂಗಳಾ ಸ್ಟೇಡಿಯಂ ರಸ್ತೆಯ ಫುಟ್‌ಪಾತ್‌ನಲ್ಲಿ ಸಂಜೆ ತಿಂಡಿ ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಉರ್ವ ಮಾರ್ಕೆಟ್‌ನಲ್ಲಿ ರವಿವಾರ ಪಾರ್ಕಿಂಗ್‌ನಿಂದ ತೊಂದರೆಯಾಗುತ್ತಿದೆ ಎಂಬ ದೂರುಗಳು ಫೋನ್ ಮೂಲಕ ಸಾರ್ವಜನಿಕರಿಂದ ವ್ಯಕ್ತವಾಯಿತು.

ಫೋನ್ ಇನ್ ಕಾರ್ಯಕ್ರಮದಲ್ಲಿ ಸಂಚಾರ ವಿಭಾಗದ ಎಸಿಪಿ ತಿಲಕ್‌ಚಂದ್ರ, ಎಎಸ್ಸೈ ಯೂಸುಫ್, ಎಚ್‌ಸಿ ಪುರುಷೋತ್ತಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News