×
Ad

ಮುಂಬೈ: ಆರ್‌ಕೆ ಸ್ಟುಡಿಯೋದಲ್ಲಿ ಬೆಂಕಿ ಅನಾಹುತ

Update: 2017-09-16 19:42 IST

 ಮುಂಬೈ, ಸೆ.16: ಮುಂಬೈಯ ಹೆಗ್ಗುರುತು ಎಂದೆನಿಸಿರುವ ಪ್ರಖ್ಯಾತ ಆರ್.ಕೆ.ಸ್ಟುಡಿಯೋದಲ್ಲಿ ಶನಿವಾರ ಅಪರಾಹ್ನ ಬೆಂಕಿ ದುರಂತ ಸಂಭವಿಸಿದ್ದು ಸ್ಟುಡಿಯೋದಲ್ಲಿ ಹಾಕಲಾಗಿದ್ದ ಟಿವಿ ರಿಯಾಲಿಟಿ ಶೋದ ಸೆಟ್ ಸುಟ್ಟುಹೋಗಿದೆ.

ಸ್ಟುಡಿಯೋದಲ್ಲಿ ಸೋನಿ ಎಂಟರ್‌ಟೈನ್‌ಮೆಂಟ್ ಟಿವಿ ಕಾರ್ಯಕ್ರಮ ‘ ಸೂಪರ್ ಡ್ಯಾನ್ಸರ್ ಸೀಸನ್-2’ ನ ಚಿತ್ರೀಕರಣಕ್ಕಾಗಿ ಹಾಕಲಾಗಿದ್ದ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸೆಟ್‌ಗೆ ಹಾನಿಯಾಗಿದೆ. ಅಗ್ನಿಶಾಮಕ ದಳದ ಆರು ವಾಹನ ಹಾಗೂ ಐದು ನೀರಿನ ಟ್ಯಾಂಕರ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ. ದುರಂತದಲ್ಲಿ ಯಾರಿಗೂ ಗಾಯವಾದ ಬಗ್ಗೆ ವರದಿಯಾಗಿಲ್ಲ ಎಂದು ಬೃಹನ್ಮುಂಬಯಿ ನಗರಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

 ದುರಂತದ ಸಂದರ್ಭ ಈ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿರಲಿಲ್ಲ. ಕಳೆದ ವಾರ ಚಿತ್ರೀಕರಣ ನಡೆಸಿದ ಬಳಿಕ ಮುಂದಿನ ಹಂತದ ಚಿತ್ರೀಕರಣವ ಸೆ.29 ಅಥವಾ 30ಕ್ಕೆ ನಿಗದಿಯಾಗಿತ್ತು. ಬೆಂಕಿ ಅನಾಹುತದ ಕಾರಣ ಕಾರ್ಯಕ್ರಮದ ಪ್ರಸಾರಕ್ಕೆ ಅಡ್ಡಿಯಾಗದು ಎಂದು ಸೋನಿ ಎಂಟರ್‌ಟೈನ್‌ಮೆಂಟ್ ಟಿವಿಯ ಸಿಬ್ಬಂದಿಯೋರ್ವರು ತಿಳಿಸಿದ್ದಾರೆ.    

 1948ರಲ್ಲಿ ಚೆಂಬೂರ್‌ನಲ್ಲಿ ಆರ್‌ಕೆ ಸ್ಟುಡಿಯೋವನ್ನು ಆರಂಭಿಸಲಾಗಿತ್ತು. ಆರ್.ಕೆ. ಬ್ಯಾನರ್‌ನಡಿ ನಿರ್ಮಾಣವಾಗಿರುವ ಸಿನಿಮಾಗಳಲ್ಲಿ - ಆಗ್, ಬರ್ಸಾತ್, ಆವಾರ, ಶ್ರೀ 420, ಜಿಸ್ ದೇಶ್ ಮೆ ಗಂಗಾ ಬೆಹ್ತೀ ಹೈ, ಮೇರಾ ನಾಮ್ ಜೋಕರ್, ಬಾಬ್ಬಿ, ಸತ್ಯಂ ಶಿವಂ ಸುಂದರಂ, ರಾಮ್ ತೇರಿ ಗಂಗಾ ಮೈಲಿ ಮುಂತಾದ ಜನಪ್ರಿಯ ಸಿನೆಮಾಗಳು ಸೇರಿವೆ. ‘ಆ ಅಬ್ ಲೌಟ್ ಚಲೇ..’ ಸಿನೆಮಾ ಆರ್‌ಕೆ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ ಕೊನೆಯ ಸಿನೆಮಾವಾಗಿದೆ. ರಾಜ್‌ಕಪೂರ್ 1988ರಲ್ಲಿ ನಿಧನರಾದಾಗ ಅವರ ಹಿರಿಯ ಪುತ್ರ ರಣಧೀರ್ ಕಪೂರ್ ಸ್ಟುಡಿಯೋದ ಉಸ್ತುವಾರಿ ವಹಿಸಿಕೊಂಡರು. ಬಳಿಕ ಅವರ ಕಿರಿಯ ಸೋದರ ರಾಜೀವ್ ಕಪೂರ್ ‘ಪ್ರೇಮ್ ಗ್ರಂಥ್’ ಎಂಬ ಸಿನೆಮಾ ನಿರ್ಮಿಸಿದರೆ, ಮತ್ತೋರ್ವ ಸೋದರ ರಿಶಿ ಕಪೂರ್ ‘ಆ ಅಬ್ ಲೌಟ್ ಚಲೇ..’ ಸಿನೆಮಾ ನಿರ್ಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News