1965ರ ಭಾರತ-ಪಾಕ್ ಯುದ್ದದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಮಾರ್ಶಲ್ ಅರ್ಜನ್ ಸಿಂಗ್ ನಿಧನ
ಹೊಸದಿಲ್ಲಿ, ಸೆ.16: 1965ರ ಭಾರತ-ಪಾಕ್ ಯುದ್ದದಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದ ಭಾರತೀಯ ವಾಯುಪಡೆದ ಮಾರ್ಶಲ್ ಅರ್ಜನ್ ಸಿಂಗ್ ದಿಲ್ಲಿಯ ಆರ್ ಆ್ಯಂಡ್ ಆರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.
ಹೃದಯಾಘಾತಕ್ಕೊಳಗಾಗಿದ್ದ ಅರ್ಜನ್ ಸಿಂಗ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಅವರು ಶನಿವಾರ ರಾತ್ರಿ 7:47 ಗಂಟೆಯ ವೇಳೆ ಮೃತಪಟ್ಟರು ಎಂದು ವಾಯುಪಡೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ. 1964ರಿಂದ 69ರವರೆಗೆ ವಾಯುಪಡೆಯ ಮುಖ್ಯಸ್ಥರಾಗಿದ್ದ ಸಿಂಗ್‌ರನ್ನು 1966ರ ಜನವರಿ 16ರಂದು ಏರ್‌ಚೀಫ್ ಮಾರ್ಶಲ್ ಹುದ್ದೆಗೆ ಭಡ್ತಿಗೊಳಿಸಲಾಗಿತ್ತು. ಏರ್‌ಚೀಫ್ ಮಾರ್ಶಲ್ ಹುದ್ದೆಗೆ ಭಡ್ತಿ ಪಡೆದ ಭಾರತೀಯ ವಾಯುಪಡೆಯ ಪ್ರಪ್ರಥಮ ಮುಖ್ಯಸ್ಥ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಜೀವಮಾನದ ಸೇವೆಯನ್ನು ಗುರುತಿಸಿ 2002ರ ಜನವರಿ 28ರಂದು ಭಾರತೀಯ ವಾಯುಪಡೆಯ ಮಾರ್ಶಲ್ ಎಂಬ ಶ್ರೇಣಿಯ ಗೌರವವನ್ನು ಪ್ರದಾನಿಸಲಾಗಿತ್ತು. ಈ ಗೌರವ ಪಡೆದ ಪ್ರಪ್ರಥಮ ಹಾಗೂ ಏಕೈಕ ‘ಫೈವ್ ಸ್ಟಾರ್’ ಶ್ರೇಣಿಯ ವಾಯುಪಡೆ ಅಧಿಕಾರಿಯಾಗಿದ್ದಾರೆ . ಅರ್ಜನ್ ಸಿಂಗ್ 1965ರ ಭಾರತ-ಪಾಕ್ ಯುದ್ದದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪದ್ಮವಿಭೂಷಣ ಪುರಸ್ಕಾರ ಪಡೆದಿದ್ದ ಸಿಂಗ್ 1969ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ತಮ್ಮ ಸೇವಾವಧಿಯಲ್ಲಿ ಸಿಂಗ್ 60 ವಿಧದ ಯುದ್ದವಿಮಾನಗಳನ್ನು ಚಲಾಯಿಸಿದ ಸಾಧನೆ ಮಾಡಿದ್ದು 1947ರ ಆಗಸ್ಟ್ 15ರಂದು (ಭಾರತಕ್ಕೆ ಸ್ವಾತಂತ್ರ ದೊರೆತ ದಿನದಂದು) ದಿಲ್ಲಿಯ ಕೆಂಪುಕೋಟೆಯ ಮೇಲೆ ಆಗಸದಲ್ಲಿ ವಾಯುಪಡೆಯ ವಿಮಾನಗಳು ನಡೆಸಿದ ಕವಾಯತ್‌ನ ನೇತೃತ್ವ ವಹಿಸಿದ್ದರು.
ಸಿಂಗ್ ಅವರ ಕುಟುಂಬದವರಿಗೆ ಸಾಂತ್ವನ ಹೇಳಿರುವ ಪ್ರಧಾನಿ ಮೋದಿ, ಸಿಂಗ್ ಓರ್ವ ಅದ್ಭುತ ಹೋರಾಟಗಾರ ಮತ್ತು ಅಪ್ರತಿಮ ದೇಶಭಕ್ತರಾಗಿದ್ದರು ಎಂದು ಟ್ವೀಟ್ ಮಾಡಿದ್ದಾರೆ.