×
Ad

ಇಂಡಿಯಾ ಗೇಟ್‌ಗೆ ತೆರಳಿದ ಕೇಂದ್ರ ಸಚಿವರಿಗೆ ತ್ಯಾಜ್ಯಗಳ ‘ವ್ಯವಸ್ಥೆ’ ಮಾಡಿದರು!

Update: 2017-09-17 22:19 IST

ಹೊಸದಿಲ್ಲಿ,ಸೆ.17: ಎರಡು ವಾರಗಳ ಕಾಲ ಹಮ್ಮಿಕೊಳ್ಳಲಾಗಿರುವ ‘ಸ್ವಚ್ಛತೆಯೇ ಸೇವೆ’ ಅಭಿಯಾನದ ಪ್ರಚಾರಕ್ಕಾಗಿ ರವಿವಾರ ಇಲ್ಲಿಯ ಪ್ರಮುಖ ಪ್ರವಾಸಿ ತಾಣ ಇಂಡಿಯಾ ಗೇಟ್‌ಗೆ ಭೇಟಿ ನೀಡಿದ್ದ ಕೇಂದ್ರದ ನೂತನ ಪ್ರವಾಸೋದ್ಯಮ ಸಚಿವ ಆಲ್ಫೋನ್ಸ್ ಕಣ್ಣಂತನಂ ಅವರು ಅಲ್ಲಿಯ ನಿಗದಿತ ಸ್ಥಳಗಳಿಗೆ ತೆರಳಿದಾಗ ಅವರು ಸ್ವಚ್ಛಗೊಳಿಸಲು ಅಲ್ಲಿ ಕಸವೇ ಇರಲಿಲ್ಲ!.

ಇದರಿಂದ ಗೊಂದಲಕ್ಕೊಳಗಾದ ಸಚಿವಾಲಯದ ಅಧಿಕಾರಿಗಳು ಮತ್ತು ಸ್ವಯಂಸೇವಕರು ಲಗುಬಗೆಯಿಂದ ಅಲ್ಲಿಂದಿಲ್ಲಿಗೆ ಓಡಾಡಿ ಸಚಿವರಿಗಾಗಿ ಸ್ವಲ್ಪ ‘ಕಸಗಳನ್ನು’ ವ್ಯವಸ್ಥೆ ಮಾಡಲು ಪರದಾಡುತ್ತಿದ್ದರೆ, ಕಣ್ಣಂತನಂ ಅಲ್ಲಿ ಬಿದ್ದಿದ್ದ ಒಂದೆರಡು ಖಾಲಿ ನೀರಿನ ಬಾಟ್ಲಿಗಳು, ಪಾನ್ ಮಸಾಲಾದ ಸ್ಯಾಚೆಟ್‌ಗಳನ್ನು ಎತ್ತಿ ‘ಸ್ವಚ್ಛ’ಗೊಳಿಸಿದರು.

ಕಣ್ಣಂತನಂ ಅಲ್ಲಿ ನಿಂತಿದ್ದ ಹಲವರಿಗೆ ಹಸ್ತಲಾಘವ ನೀಡಿ ಕೆಲವರ ಬೆನ್ನು ತಟ್ಟಿ, ಸ್ಥಳವನ್ನು ಸ್ವಚ್ಛವಾಗಿರಿಸುವಂತೆ ಕೇಳಿಕೊಂಡರು. ಆದರೆ ಹೆಚ್ಚಿನವರಿಗೆ ಅವರು ಸಚಿವರು ಎನ್ನುವುದು ಗೊತ್ತಾಗಿರಲಿಲ್ಲ.

ಅಲ್ಲಿ ಗೋಲ್‌ಗಪ್ಪಾದಂತಹ ಬೀದಿಬದಿ ಆಹಾರಗಳನ್ನು ಮಾರುತ್ತಿದ್ದವರನ್ನು ಮಾತಿಗೆಳೆದ ಕಣ್ಣಂತನಂ ಅವರ ಗಳಿಕೆಯ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದರಲ್ಲದೆ, ತಿಂದು ಉಳಿದ ತಿನಿಸು ಮತ್ತು ಪ್ಲೇಟ್‌ಗಳನ್ನು ಕಸದ ತೊಟ್ಟಿಗಳಲ್ಲಿಯೇ ಹಾಕಲು ತಮ್ಮ ಗ್ರಾಹಕರಿಗೆ ಸೂಚಿಸುವಂತೆ ಅವರಿಗೆ ತಿಳಿಸಿದರು.
ಇಂಡಿಯಾ ಗೇಟ್ ಪ್ರದೇಶವನ್ನು ಪ್ರತಿದಿನವೂ ಸ್ವಚ್ಛಗೊಳಿಸಲಾಗುತ್ತಿದೆಯಾದರೂ ಸ್ವಚ್ಛತೆ ಇನ್ನಷ್ಟು ಹೆಚ್ಚುವ ಅಗತ್ಯವಿದೆ ಎಂದು ಕಣ್ಣಂತನಂ ಹೇಳಿದರು.
ಇಂಡಿಯಾ ಗೇಟ್ ಸ್ವಚ್ಛತೆಗಾಗಿ ತಾನಿಲ್ಲಿ ಬಂದಿದ್ದೇನೆ. ಸ್ವಚ್ಛತಾ ಕಾರ್ಯ ದೇಶಾದ್ಯಂತ ನಡೆಯುತ್ತಿದೆ. ನಾವು ಭಾರತವನ್ನು ಸ್ವಚ್ಛವಾಗಿರಿಸಬೇಕು ಎನ್ನುವುದು ಇದರ ಸಂದೇಶ ವಾಗಿದೆ. ಕೇವಲ ಸರಕಾರಿ ಅಧಿಕಾರಿಗಳು ಮಾತ್ರವಲ್ಲ, ದೇಶದ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬೇಕಿದೆ. ಇದು ಕೇವಲ ವಾರ್ಷಿಕ ಅಥವಾ ಕ್ಯಾಮೆರಾಗಳೆದುರಿನ ಕಾರ್ಯ ವಾಗದೆ ದಿನನಿತ್ಯದ ಕಾರ್ಯವಾಗಬೇಕು ಎಂದು ಕಣ್ಣಂತನಂ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News