ಎಲ್ಲ ವಲಯಗಳಿಗೂ ಪಿತೃತ್ವದ ರಜೆ !
ಹೊಸದಿಲ್ಲಿ, ಸೆ. 17: ಶಿಶು ಜನಿಸಿದ ಬಳಿಕ ಆರಂಭದ ದಿನಗಳಲ್ಲಿ ತಂದೆಯ ಹಕ್ಕುಗಳ ಪ್ರತಿಪಾದನೆಗೆ ಅಸಂಘಟಿತ ಹಾಗೂ ಖಾಸಗಿ ವಲಯ ಸೇರಿದಂತೆ ಎಲ್ಲ ಉದ್ಯೋಗಿಗಳಿಗೆ ಮೂರು ತಿಂಗಳು ವಿಸ್ತರಿಸಬಹುದಾದ ಪಿತೃತ್ವ ರಜೆ ಪಡೆಯಲು ಸಂಸದರ ವೈಯಕ್ತಿಕ ಮಸೂದೆ ಶಿಫಾರಸು ಮಾಡಿದೆ.
ತಂದೆ ಹಾಗೂ ತಾಯಿ ಇಬ್ಬರಿಗೂ ಸಮಾನವಾಗಿ ಪೋಷಕರ ಸೌಲಭ್ಯ ನೀಡುವ ಪಿತೃತ್ವ ಸೌಲಭ್ಯ ಮಸೂದೆ 2017 ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಪರಿಶೀಲನೆಗೆ ಬರುವ ಸಾಧ್ಯತೆ ಇದೆ. ಮಕ್ಕಳ ಪೋಷಣೆ ಪೋಷಕರ ಜವಾಬ್ದಾರಿ. ನವಜಾತ ಶಿಶುವಿನ ಉತ್ತಮಿಕೆಗಾಗಿ ಈ ಸಮಯವನ್ನು ಪೋಷಕರು ಮೀಸಲಿಡಬೇಕು ಎಂದು ಮಸೂದೆಯ ಹಿಂದಿರುವ ಕಾಂಗ್ರೆಸ್ ಸಂಸದ ರಾಜೀವ್ ಸಾತವ್ ಹೇಳಿದ್ದಾರೆ. ಖಾಸಗಿ ಹಾಗೂ ಅಸಂಘಟಿತ ವಲಯದ ಮುಖ್ಯವಾಗಿ ಬ್ಲೂ ಕಾಲರ್‌ಉದ್ಯೋಗ ನಿರ್ವಹಿಸುತ್ತಿರುವ 32 ಕೋಟಿ ಪುರುಷರಿಗೆ ಈ ಮಸೂದೆಯಿಂದ ಲಾಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಅಖಿಲ ಭಾರತ ಹಾಗೂ ಕೇಂದ್ರ ನಾಗರಿಕ ಸೇವಾ ನಿಯಮ ಕೇಂದ್ರ ಸರಕಾರದ ಉದ್ಯೋಗಿಗಳಿಗೆ 15 ದಿನ ಪಿತೃತ್ವದ ರಜೆ ನೀಡುತ್ತಿದೆ. ವಿವಿಧ ಕಾರ್ಪೋರೇಟ್ ಕಚೇರಿಗಳು ಕೂಡ ತಮ್ಮ ಉದ್ಯೋಗಿಗಳಿಗೆ ಪಿತೃತ್ವದ ಸೌಲಭ್ಯ ನೀಡುತ್ತದೆ.
ಈ ಮಸೂದೆ ಪಿತೃತ್ವ ರಜೆಯ ಅವಧಿ ಹೆಚ್ಚಿಸುವುದು ಮಾತ್ರವಲ್ಲ, ಬದಲಾಗಿ ಈ ಸೌಲಭ್ಯವನ್ನು ವಲಯದ ಎಲ್ಲರಿಗೂ ವಿಸ್ತರಿಸಲಿದೆ.