ಲಂಚದ ಆರೋಪ: ಸೇನಾ ವೈದ್ಯಾಧಿಕಾರಿಯ ಸೆರೆ
ಹೊಸದಿಲ್ಲಿ,ಸೆ.18: ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ)ಯಿಂದ ವೈದ್ಯಕೀಯ ಕಾಲೇಜುಗಳ ತಪಾಸಣೆ ಮತ್ತು ಸೀಟುಗಳ ಮಾನ್ಯತೆಗೆ ಸಂಬಂಧಿಸಿದ ಮಾಹಿತಿಗಳ ಸೋರಿಕೆಗಾಗಿ 10 ಲಕ್ಷ ರೂ.ಲಂಚವನ್ನು ಪಡೆದ ಆರೋಪದಲ್ಲಿ ಆರ್ಮಿ ಮೆಡಿಕಲ್ ಕಾರ್ಪ್ಸ್‌ನ ಕರ್ನಲ್ ಅಜಯ ಕುಮಾರ್ ಸಿಂಗ್, ಓರ್ವ ಎಂಸಿಐ ಗುಮಾಸ್ತ ಮತ್ತು ಇತರ ಇಬ್ಬರನ್ನು ಸಿಬಿಐ ಬಂಧಿಸಿದೆ. ಬಂಧಿತರನ್ನು ಇಲ್ಲಿಯ ವಿಶೇಷ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ಐದು ದಿನಗಳ ಸಿಬಿಐ ಕಸ್ಟಡಿಯನ್ನು ವಿಧಿಸಲಾಗಿದೆ.
ಎಂಸಿಐನ ವೌಲ್ಯಮಾಪನ ಸಮಿತಿಯ ಸದಸ್ಯರಾಗಿರುವ ಸಿಂಗ್ ಪರವಾಗಿ ಮಧ್ಯವರ್ತಿಯೋರ್ವ ಇಬ್ಬರು ಹವಾಲಾ ಏಜೆಂಟ್‌ಗಳಿಂದ 10 ಲ.ರೂ. ಸ್ವೀಕರಿಸುತ್ತಿರು ವಾಗ ಸಿಕ್ಕಿ ಬಿದ್ದಿದ್ದ. ಆತ ನೀಡಿದ ಮಾಹಿತಿಯ ಮೇರೆಗೆ ಸಿಬಿಐ ಸಿಂಗ್ ಅವರನ್ನು ಬಂಧಿಸಿತ್ತು.
ಎಂಸಿಐ ಗುಮಾಸ್ತ ಸಂತೋಷ ಕುಮಾರ, ಇಬ್ಬರು ಮಧ್ಯವರ್ತಿಗಳಾದ ಸುಶೀಲ ಕುಮಾರ ಮತ್ತು ಸಚಿನ್ ಕುಮಾರ ಅವರನ್ನೂ ಸಿಬಿಐ ಬಂಧಿಸಿದೆ. ಸಿಂಗ್ ಪರವಾಗಿ ಸುಶೀಲ ಕುಮಾರ ಹಣವನ್ನು ಒಯ್ಯಲಿದ್ದ ಎನ್ನಲಾಗಿದೆ.
ಇದಕ್ಕ್ಕೂ ಮುನ್ನ ಸಿಬಿಐ ಈ ನಾಲ್ವರು ಬಂಧಿತ ಆರೋಪಿಗಳು ಮತ್ತು ಪುದುಚೇರಿಯ ಶ್ರೀವೆಂಕಟೇಶ್ವರ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಬಿ.ರಾಮಚಂದ್ರನ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿತ್ತು.
ಸಿಂಗ್ ನಿವಾಸಗಳು ಸೇರಿದಂತೆ ದಿಲ್ಲಿ, ಪುದುಚೇರಿ ಮತ್ತು ಚೆನ್ನೈಗಳ ಒಂಭತ್ತು ಕಡೆಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದ್ದು, ಎರಡು ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.