ನೂತನ ತಂತ್ರಜ್ಞಾನದೊಂದಿಗೆ ಡಿಜಿಟಲ್ ಪಾವತಿಗೆ ಹೆಚ್ಚಿನ ಒತ್ತು: ಜೇಟ್ಲಿ
ಹೊಸದಿಲ್ಲಿ,ಸೆ.18: ಮಾರುಕಟ್ಟೆಯಲ್ಲಿ ನೂತನ ತಂತ್ರಜ್ಞಾನಗಳ ಪ್ರವೇಶದೊಂದಿಗೆ ಡಿಜಿಟಲ್ ಪಾವತಿಯು ಮತ್ತೆ ಗತಿಯನ್ನು ಕಂಡುಕೊಳ್ಳಲಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಇಲ್ಲಿ ಆಶಯ ವ್ಯಕ್ತಪಡಿಸಿದರು.
ಭಾರತಕ್ಕಾಗಿ ಗೂಗಲ್ ಅಭಿವೃದ್ಧಿಗೊಳಿಸಿರುವ ಡಿಜಿಟಲ್ ಪೇಮೆಂಟ್ ಆ್ಯಪ್ ‘ತೇಝ್’ಅನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದ ಅವರು, ಹೆಚ್ಚಿನ ಜನರು ಡಿಜಿಟಲ್ ವಿಧಾನವು ವಹಿವಾಟಿಗೆ ಅನುಕೂಲಕರ ಎನ್ನುವುದನ್ನು ಅರಿತುಕೊಳ್ಳದೆ ಅನಿವಾರ್ಯವಾಗಿ ಹಣ ಪಾವತಿಗಾಗಿ ಅದನ್ನು ಬಳಸುತ್ತಿದ್ದರು ಮತ್ತು ಈ ಅನಿವಾರ್ಯತೆಯಿಂದ ಬಹಳಷ್ಟು ಜನರಿಗೆ ಇಂದು ಡಿಜಿಟಲ್ ಪಾವತಿ ವಿಧಾನವೇ ಅಭ್ಯಾಸವಾಗಿದೆ ಎಂದ ಅವರು, ನೋಟು ಅಮಾನ್ಯದ ಬಳಿಕ ನಾವು ಡಿಜಿಟಲ್ ವಹಿವಾಟುಗಳ ಸಂಖ್ಯೆಯಲ್ಲಿ ಉತ್ತುಂಗವನ್ನು ತಲುಪಿದ್ದೆವು. ಆದರೆ ಬಳಿಕ ಅದು ಸ್ವಲ್ಪ ಇಳಿಮುಖಗೊಂಡಿತ್ತು ಮತ್ತು ಇದೀಗ ಮತ್ತೆ ಏರಿಕೆಯನ್ನು ಕಾಣುತ್ತಿದೆ ಎಂದರು.
ಸರಕಾರದ ಬೆಂಬಲ ಹೊಂದಿರುವ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ)ನ್ನು ಆಧರಿಸಿರುವ ‘ತೇಝ್’ ಬಳಕೆದಾರರು ತಮ್ಮ ಬ್ಯಾಂಕ್ ಖಾತೆಗಳಿಂದ ಸಣ್ಣ ಅಥವಾ ದೊಡ್ಡ ಪಾವತಿಗಳನ್ನು ನೇರವಾಗಿ ಮಾಡಲು ಅವಕಾಶ ಕಲ್ಪಿಸುತ್ತದೆ ಮತ್ತು ಈ ಸೇವೆ ಉಚಿತವಾಗಿದೆ ಎಂದು ಗೂಗಲ್ ತಿಳಿಸಿದೆ. ಇಂಗ್ಲೀಷ್ ಮತ್ತು ಕನ್ನಡ ಸೇರಿದಂತೆ ಇತರ ಏಳು ಭಾರತೀಯ ಭಾಷೆಗಳನ್ನು ಅದು ಬೆಂಬಲಿಸುತ್ತದೆ.