ರೊಹಿಂಗ್ಯಾ ಮುಸ್ಲಿಮರ ಮೇಲೆ ದೌರ್ಜನ್ಯ ಖಂಡಿಸಿ ಗೋವಾದಲ್ಲಿ ಶಾಂತಿ ರ‍್ಯಾಲಿ
Update: 2017-09-18 22:22 IST
ಪಣಜಿ, ಸೆ. 18: ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಾಗೂ ನೆರೆಯ ರಾಷ್ಟ್ರದಿಂದ ಆಗಮಿಸುತ್ತಿರುವವರನ್ನು ತಡೆಯಲು ಹಸ್ತಕ್ಷೇಪ ನಡೆಸುವಂತೆ ಭಾರತ ಹಾಗೂ ವಿಶ್ವ ಸಂಸ್ಥೆಯನ್ನು ಕೋರಿ ಗೋವಾ ಮೂಲದ ಮುಸ್ಲಿಂ ಸಂಘಟನೆ ಸೋಮವಾರ ಶಾಂತಿ ರ‍್ಯಾಲಿ ನಡೆಸಿತು.
ಪಣಜಿಯಿಂದ 35 ಕಿ.ಮೀ. ದಕ್ಷಿಣದ ಮಾರ್ಗೊದಲ್ಲಿರುವ ಸಲ್ಸೆಟ್ ಮುಸ್ಲಿಂ ವೇದಿಕೆಯ ಸುಮಾರು 100 ಸದಸ್ಯರು ರ‍್ಯಾಲಿಯಲ್ಲಿ ಪಾಲ್ಗೊಂಡರು.
ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರಿಗೆ ಕಿರುಕುಳ ನೀಡಿ ಅವರು ಮನೆ ಬಿಟ್ಟು ವಲಸೆ ಬರುವಂತೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರತಿಭಟನಾಕಾರರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೇರಸ್ ಅವರಿಗೆ ಜ್ಞಾಪನಾ ಪತ್ರ ಸಲ್ಲಿಸಿದರು
ಜ್ಞಾಪನಾ ಪತ್ರವನ್ನು ದಕ್ಷಿಣ ಗೋವಾ ಜಿಲ್ಲೆಯ ಜಿಲ್ಲಾಧಿಕಾರಿ ಅಂಜಲಿ ಸೆಹ್ರಾವತ್ ಅವರಿಗೆ ಸಲ್ಲಿಸಲಾಯಿತು.