ಉ.ಕೊರಿಯಾದ ಪರಮಾಣು ಪ್ರಸರಣ ನಂಟಿನ ತನಿಖೆಗೆ ಭಾರತದ ಆಗ್ರಹ

Update: 2017-09-19 14:07 GMT

ಹೊಸದಿಲ್ಲಿ,ಸೆ.19: ಉತ್ತರ ಕೊರಿಯಾಕ್ಕೆ ಪರಮಾಣು ತಂತ್ರಜ್ಞಾನ ವರ್ಗಾವಣೆಯ ನಂಟಿನ ಕುರಿತು ತನಿಖೆ ನಡೆಯಬೇಕೆಂದು ಭಾರತವು ಪಾಕಿಸ್ತಾನವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಆಗ್ರಹಿಸಿದೆ.

ಉ.ಕೊರಿಯಾ ಕಳೆದ ವಾರ ಜಪಾನಿನ ಮೇಲೆ ಮಧ್ಯಮ ವ್ಯಾಪ್ತಿಯ ಪ್ರಕ್ಷೇಪಕ ಕ್ಷಿಪಣಿಯೊಂದನ್ನು ಪ್ರಯೋಗಿಸಿದ್ದ ಉ.ಕೊರಿಯಾ ಸೆ.3ರಂದು ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಜಲಜನಕ ಬಾಂಬ್‌ನೊಂದಿಗೆ ತನ್ನ ಅತ್ಯಂತ ಶಕ್ತಿಶಾಲಿ ಪರಮಾಣು ಪರೀಕ್ಷೆಯನ್ನು ನಡೆಸಿತ್ತು. ಈ ಪರೀಕ್ಷೆಯಿಂದಾಗಿ ರಿಕ್ಟರ್ ಮಾಪಕದಲ್ಲಿ 6.3 ಪ್ರಮಾಣದ ಕೃತಕ ಭೂಕಂಪ ಸಂಭವಿಸಿತ್ತು.

ಉ.ಕೊರಿಯಾದ ಇತ್ತೀಚಿನ ಚಟುವಟಿಕೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು, ಅದರ ಪರಮಾಣು ಪ್ರಸರಣ ಸಂಪರ್ಕ ಗಳ ಕುರಿತು ತನಿಖೆ ನಡೆಯಬೇಕು ಮತ್ತು ಅದರಲ್ಲಿ ಭಾಗಿಯಾದವರನ್ನು ಉತ್ತರದಾಯಿ ಗಳನ್ನಾಗಿಸಬೇಕು ಎಂದು ಒತ್ತಾಯಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ ಕುಮಾರ ಅವರು ನ್ಯೂಯಾರ್ಕ್‌ನಲ್ಲಿ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.

ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್‌ಸನ್ ಮತ್ತು ಜಪಾನ್‌ನ ವಿದೇಶಾಂಗ ಸಚಿವ ಟಾರೊ ಕೊನೊ ಅವರೊಂದಿಗೆ ತ್ರಿಪಕ್ಷೀಯ ಮಾತುಕತೆ ಸಂದರ್ಭ ಸ್ವರಾಜ್ ಅವರ ಈ ಹೇಳಿಕೆ ಹೊರಬಿದ್ದಿದ್ದು, ಅವರು ಪಾಕಿಸ್ತಾನವನ್ನು ನೇರವಾಗಿ ಉಲ್ಲೇಖಿಸಲಿಲ್ಲ. ಆದರೆ ಎ.ಕ್ಯೂ.ಖಾನ್ ಅವರು ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಮುಖ್ಯಸ್ಥರಾಗಿದ್ದಾಗ ಆ ರಾಷ್ಟ್ರವು ಉ.ಕೊರಿಯಾಕ್ಕೆ ಪರಮಾಣು ತಂತ್ರಜ್ಞಾನವನ್ನು ರಹಸ್ಯವಾಗಿ ವರ್ಗಾವಣೆ ಗೊಳಿಸಿತ್ತು ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News