ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ದೆಹಲಿಯಲ್ಲಿ ಈದ್ ಸ್ನೇಹಕೂಟ

Update: 2017-09-19 16:32 GMT

ಹೊಸದಿಲ್ಲಿ, ಸೆ. 19: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಹೊಸದಿಲ್ಲಿಯಲ್ಲಿ ಇತ್ತೀಚೆಗೆ ಈದ್ ಸ್ನೇಹಕೂಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪತ್ರಕರ್ತರು, ಕಾರ್ಯರ್ತರು ಮತ್ತು  ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಲ್ ವಾಹಿದ್ ಸೇಠ್ ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಸಂಘಟನೆಯನ್ನು ಪರಿಚಯಿಸಿದರು. ಮುಸ್ಲಿಮರನ್ನು ಅಪರಾಧಿಗಳಂತೆ ಚಿತ್ರಿಸುವ ಮತ್ತು ಫ್ಯಾಶಿಸ್ಟ್ ಶಕ್ತಿಗಳ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಮಾಧ್ಯಮಗಳಿಂದ ಇಲ್ಲಿನ ಅಲ್ಪಸಂಖ್ಯಾತರು, ಅದರಲ್ಲೂ ವಿಶೇಷವಾಗಿ ಮುಸ್ಲಿಮರು ಕಿರುಕುಳಕ್ಕೊಳಗಾಗುತ್ತಿದ್ದು, ಅದನ್ನು ವಿರೋಧಿಸಬೇಕೆಂದು ಅವರು ಸಭಿಕರಲ್ಲಿ ಮನವಿ ಮಾಡಿದ್ದಾರೆ. ಪಾಪ್ಯುಲರ್ ಫ್ರಂಟ್  ಆಫ್ ಇಂಡಿಯಾ ಸಂಘಟನೆಯು ಕೂಡಾ ಇಂತಹ ಪ್ರಯತ್ನಗಳಿಗೆ ಬಲಿಪಶುವಾಗಿದ್ದು, ಅದೇ ಕಾರಣಕ್ಕಾಗಿ ಭಯೋತ್ಪಾದನಾ ನಂಟು ಕಲ್ಪಿಸಿ ಅಥವಾ ಹೋಲಿಸಿ ಸಂಘಟನೆಯ ಮೇಲೆ ತಪ್ಪಾಗಿ ಸುಳ್ಳಾರೋಪ ಮಾಡಲಾಗುತ್ತಿದೆ. ಹಾದಿಯಾ ಮತಾಂತರ ಪ್ರಕರಣದಲ್ಲಿ ಸಂಘಟನೆಯ ‘‘ದಅ್ವಾ ತಂಡ’’ ಭಾಗಿಯಾಗಿದೆ ಎಂಬ ಎನ್‌ಐಎ ಇತ್ತೀಚೆಗೆ ಮಾಡಿದ ಗುಪ್ತ ವರದಿಯನ್ನು ಆಧರಿಸಿ ಮಾಧ್ಯಮಗಳಲ್ಲಿ ಸಂಘಟನೆಯನ್ನು ಅತ್ಯುಗ್ರವಾಗಿ ಚಿತ್ರಿಸಲಾಗುತ್ತಿದೆ. ಅಲ್ಲದೇ ವರದಿಯು, ಸಂಘಟನೆಯು ಲವ್‌ಜಿಹಾದನ್ನು ಉತ್ತೇಜಿಸುತ್ತಿದೆ ಎಂದು ಚಿತ್ರಿಸಿ ಮುಸ್ಲಿಮ್ ವಿರೋಧಿ ನೀತಿಯನ್ನು ಪ್ರಚಾರಪಡಿಸುವುದನ್ನು ಅವರು ಖಂಡಿಸಿದರು.

ಇದರ ಅನುಸಾರ, ಪಾಪ್ಯುಲರ್ ಫ್ರಂಟ್  ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಇ.ಎಂ.ಅಬ್ದುಲ್ ರಹಿಮಾನ್ ಅವರು ಪ್ರಸ್ತಾಪಿಸಿದ ವಿಷಯದ ಕುರಿತು ಮುಕ್ತ ಚರ್ಚೆ ನಡೆಯಿತು. ದೆಹಲಿಯ ಅಲ್ಪಸಂಖ್ಯಾತ ಸಮಿತಿಯ ಸದಸ್ಯ ಡಾ.ಝಫರುಲ್ ಇಸ್ಲಾಮ್ ಖಾನ್, ಪತ್ರಕರ್ತ ತಸ್ನೀಮ್ ಕೌಸರ್, ಮಾಧ್ಯಮ ನಿರೂಪಕ ಡಾ.ತಸ್ಲೀಮ್ ರಹ್ಮಾನಿ ಮತ್ತು ಇನ್ನಿತರರು ಚರ್ಚೆಯಲ್ಲಿ ಉಪಸ್ಥಿತರಿದ್ದರು. ಅವರು ತಮ್ಮ ಅನುಭವಗಳನ್ನು ಮತ್ತು ಈ ಪ್ರಯತ್ನವನ್ನು ಹೇಗೆ ಎದುರಿಸಬೇಕೆಂಬ ಸಲಹೆಗಳನ್ನು ನೀಡಿದರು.

ಪಾಪ್ಯುಲರ್ ಫ್ರಂಟ್ ಉತ್ತರ ವಲಯಾಧ್ಯಕ್ಷ ಇಸ್ಮಾಯಿಲ್, ದೆಹಲಿ ರಾಜ್ಯಾಧ್ಯಕ್ಷ ಫರ್ವೇಝ್ ಅಹ್ಮದ್ ಮತ್ತು ಅಡ್ವಕೇಟ್ ಮುಹಮ್ಮದ್ ಯೂಸುಫ್ ಮತ್ತು ಇತರರು  ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News