ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ರಿಂದ ಸ್ಫೋಟಕ ಮಾಹಿತಿ ಬಹಿರಂಗ

Update: 2017-09-19 17:07 GMT

# ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ನಲ್ಲಿ ತನಿಖೆ ಹಳ್ಳ ಹಿಡಿದಿದ್ದು ಹೇಗೆ ?
# ತನಿಖಾಧಿಕಾರಿಯೇ ಖೆಡ್ಡಾಗೆ ಬಿದ್ದಿದ್ದು ಹೇಗೆ ?
# ಇಡೀ ಪ್ರಕರಣದಲ್ಲಿ ಪತ್ರಕರ್ತೆಯ ಪಾತ್ರ ಏನು ?
# ಸತ್ಯ ಬಹಿರಂಗಪಡಿಸುವ ಹೆಸರಲ್ಲಿ ಅರೋಪಿಗಳಿಗೆ ನೆರವಾದಳೇ ಪತ್ರಕರ್ತೆ ?
# ಗುಜರಾತ್ ಹತ್ಯಾಕಾಂಡದಲ್ಲಿ ಆಗಿನ ಸಿಎಂ ಪಾತ್ರ ಮುಚ್ಚಿ ಹಾಕಲು ನಡೆಯಿತೇ ಡೀಲ್ ?
# ಮುಚ್ಚಿ ಹೋಗಿರುವ ಎನ್ ಕೌಂಟರ್ ತನಿಖೆಗೆ ಮತ್ತೆ ಜೀವ ?

ಹೊಸದಿಲ್ಲಿ, ಸೆ.19: ಮಾಜಿ ಐಪಿಎಸ್ ಅಧಿಕಾರಿ ಸಂಜೀವ ಭಟ್ ಅವರು ಯುವ ತನಿಖಾ ಪತ್ರಕರ್ತೆಯೋರ್ವಳು 2002ರ ಗುಜರಾತ್ ಕೋಮು ಗಲಭೆಯಲ್ಲಿ ರಾಜ್ಯದ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪಾತ್ರವನ್ನು ದುರ್ಬಲಗೊಳಿಸಲು ರಾಜಿ ಮಾಡಿಕೊಂಡಿದ್ದಾಳೆ ಎಂಬ ಸ್ಫೋಟಕ ಆರೋಪವನ್ನು ಮಾಡಿದ್ದಾರೆ.

‘ಎ ಲಿಟ್ಲ್ ನೋನ್ ಸ್ಟೋರಿ ಫ್ರಮ್ ಗುಜರಾತ್’ ಶೀರ್ಷಿಕೆಯ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಭಟ್ ಅವರು, "ಐಪಿಎಸ್ ಅಧಿಕಾರಿಯೋರ್ವನೊಂದಿಗೆ ತನ್ನ ಪ್ರಣಯ ವ್ಯವಹಾರವು ಬಹಿರಂಗಗೊಂಡು ಮಾನ ಕಳೆದುಕೊಳ್ಳುವ ಭೀತಿಯಿಂದ ಯುವ ತನಿಖಾ ಪತ್ರಕರ್ತೆ ತನ್ನ ಬರವಣಿಗೆಯನ್ನು ಬದಲಿಸುವಂತೆ ಒತ್ತಡ ಹೇರಲಾಗಿತ್ತು" ಎಂದು ಆಪಾದಿಸಿದ್ದಾರೆ.

ಗುಜರಾತ್ ಕೇಡರ್‌ನ 1988ರ ತಂಡದ ಅಧಿಕಾರಿಯಾಗಿರುವ ಭಟ್ ತನ್ನ ಪೋಸ್ಟ್‌ನಲ್ಲಿ ಯಾರನ್ನೂ ಹೆಸರಿಸಿಲ್ಲ.

"ಸೊಹ್ರಾಬುದ್ದೀನ್ ಶೇಖ್ ಮತ್ತು ತುಳಸಿರಾಂ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣಗಳಲ್ಲಿ ಸಿಬಿಐ ತನಿಖೆ ಅಂತಿಮ ಹಂತದಲ್ಲಿದ್ದು, ಗುಜರಾತಿನ ಆಗಿನ ಗೃಹಸಚಿವ ಮತ್ತು ಮುಖ್ಯಮಂತ್ರಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿತ್ತು. ನಿಯತಕಾಲಿಕವೊಂದು ತನ್ನ ಯುವ ತನಿಖಾ ಪತ್ರಕರ್ತೆಗೆ ಈ ತನಿಖೆಯ ವಿವರಗಳನ್ನು ಸಂಗ್ರಹಿಸಿ ಜನರನ್ನು ಸೆಳೆಯಬಲ್ಲ ವರದಿಯೊಂದನ್ನು ಸಿದ್ಧಪಡಿಸುವಂತೆ ಸೂಚಿಸಿತ್ತು. ಅದರಂತೆ ಅಹ್ಮದಾಬಾದ್ ತಲುಪಿದ್ದ ಆಕೆ ಪೊಲೀಸ್ ಮತ್ತು ಸಿಬಿಐ ಮೂಲಗಳಿಂದ ಮಾಹಿತಿಗಳನ್ನು ಹೆಕ್ಕಲು ಪ್ರಯತ್ನಿಸಿದ್ದಳಾದರೂ ಅದು ಫಲ ನೀಡಿರಲಿಲ್ಲ. ಹೀಗಾಗಿ ಆಕೆ ನ್ಯಾಯಾಲಯದಲ್ಲಿ ಈ ನಕಲಿ ಎನ್‌ಕೌಂಟರ್ ಪ್ರಕರಣಗಳ ಬೆನ್ನುಬಿದ್ದಿದ್ದ ಅಹ್ಮದಾಬಾದ್‌ನ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತನನ್ನು ಸಂಪರ್ಕಿಸಿ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಳು" ಎಂದು ಭಟ್ ಬರೆದಿದ್ದಾರೆ.

"ಈ ಚೈನ್ ಸ್ಮೋಕಿಂಗ್ ಪತ್ರಕರ್ತೆಯ ಚೆಲುವಿಗೆ ಮರುಳಾಗಿದ್ದ ಆ ನ್ಯಾಯವಾದಿ ಖುಷಿಯಿಂದಲೇ ಪ್ರಕರಣದ ರಸವತ್ತಾದ ವಿವರಗಳನ್ನು ಆಕೆಯೊಂದಿಗೆ ಹಂಚಿಕೊಂಡಿದ್ದ ಮತ್ತು ತನಿಖಾ ವರದಿ ರೂಪುಗೊಳ್ಳತೊಡಗಿತ್ತು. ಆದರೆ ಇನ್ನಷ್ಟು ಹೆಚ್ಚಿನ ವಿವರಗಳನ್ನು ಬಯಸಿದ್ದ ಪತ್ರಕರ್ತೆ ನಕಲಿ ಎನ್‌ಕೌಂಟರ್ ಪ್ರಕರಣಗಳ ತನಿಖೆಯ ನೇತೃತ್ವ ವಹಿಸಿದ್ದ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಳು. ಈ ಪೈಕಿ ಕಿರಿಯ ಅಧಿಕಾರಿ ಆಕೆಯತ್ತ ಆಕರ್ಷಿತನಾಗಿದ್ದ ಮತ್ತು ಆಕೆಗೂ ಆತನ ಮೇಲೆ ಮೋಹ ಹುಟ್ಟಿತ್ತು. ಅವರಿಬ್ಬರ ಏಕಾಂತ ಭೇಟಿಗಳು ಹೆಚ್ಚುತ್ತಲೇ ಹೋಗಿದ್ದವು ಮತ್ತು ತನಿಖೆಯ ಮಾಹಿತಿಗಳು ಸಲೀಸಾಗಿ ಹರಿದುಬರತೊಡಗಿದ್ದವು. ನಿಯತಕಾಲಿಕಕ್ಕೆ ಒಳ್ಳೊಳ್ಳೆಯ ಕಥೆಗಳು ದೊರೆಯತೊಡಗಿದ್ದವು" ಎಂದು ಭಟ್ ಹೇಳಿದ್ದಾರೆ.

"ತಮ್ಮ ಪ್ರಣಯ ವ್ಯವಹಾರಕ್ಕಾಗಿ ಇಬ್ಬರೂ ಪ್ರೇಮಿಗಳು ಸರಕಾರಿ ಅತಿಥಿಗೃಹಗಳಲ್ಲಿ ಸೇರುತ್ತಿದ್ದರು. ಆದರೆ ಗುಜರಾತ್ ಪೊಲೀಸರು ತಾವಿಬ್ಬರೂ ಸೇರುತ್ತಿದ್ದ ಸ್ಥಳಗಳನ್ನು 'ಬಗ್' ಮಾಡಿದ್ದರು ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಹೀಗಾಗಿ ಅಲ್ಲಿಯ ಅವರ ಎಲ್ಲ ಪ್ರಣಯ ವ್ಯವಹಾರಗಳು ವೀಡಿಯೊದಲ್ಲಿ ದಾಖಲಾಗುತ್ತಿದ್ದವು ಮತ್ತು ಇದು ಚಿತ್ರಣವನ್ನೇ ಬದಲಿಸಿಬಿಟ್ಟಿತ್ತು. ಬೇಟೆಯಾಡಲು ಬಂದಿದ್ದ ಪತ್ರಕರ್ತೆ ತಾನೇ ಬೇಟೆಯಾಗಿಬಿಟ್ಟಿದ್ದಳು. ನಿರಾಕರಿಸಲಾಗದ ವೀಡಿಯೋ ಸಾಕ್ಷಾಧಾರಗಳ ಬಗ್ಗೆ ಯುವ ಐಪಿಎಸ್ ಅಧಿಕಾರಿಗೆ ಮಾಹಿತಿ ನೀಡಲಾಗಿತ್ತು. ಮಾತುಕತೆಗಳು ನಡೆದು ಒಪ್ಪಂದವಾಗಿತ್ತು ಮತ್ತು ಅಲ್ಲಿಗೆ ತನಿಖೆಯು ಹಳ್ಳ ಹಿಡಿದಿತ್ತು. ಎನ್‌ಕೌಂಟರ್ ಪ್ರಕರಣಗಳನ್ನು ಸರಿಪಡಿಸಲು ಸಾಧ್ಯವೇ ಇಲ್ಲದಂತೆ ದುರ್ಬಲಗೊಳಿಸಲಾಗಿತ್ತು" ಎಂದು ಭಟ್ ಬರೆದಿದ್ದಾರೆ.

"ಈ ಮಾಹಿತಿ ದಿಲ್ಲಿಯಲ್ಲಿಯ ಸಿಬಿಐ ಕಚೇರಿಗೆ ತಲುಪಿತ್ತು ಮತ್ತು ಅದು ಯುವ ಅಧಿಕಾರಿಯನ್ನು ತನಿಖಾ ಕರ್ತವ್ಯದಿಂದ ಮುಕ್ತಗೊಳಿಸಿ ಆತನನ್ನು ಮಾತೃರಾಜ್ಯಕ್ಕೆ ಮರಳಿಸಿತ್ತು. ಆದರೆ ಅದಾಗಲೇ ತನಿಖೆಯು ಸಂಪೂರ್ಣ ಹಳ್ಳ ಹಿಡಿದಿತ್ತು. ಬಹಿರಂಗವಾಗಿ ಮಾನ ಹರಾಜು ಹಾಕಬೇಕೋ? ಅಥವಾ ನಕಲಿ ಎನ್‌ಕೌಂಟರ್ ಪ್ರಕರಣಗಳಲ್ಲಿ ನ್ಯಾಯವಾದಿ-ಸಾಮಾಜಿಕ ಕಾರ್ಯಕರ್ತನ ಪ್ರಯತ್ನಗಳನ್ನು ಹಳಿ ತಪ್ಪಿಸುವಲ್ಲಿ ನೆರವಾಗುತ್ತೀಯಾ? ಎಂಬ ಆಯ್ಕೆಗಳನ್ನು ಪತ್ರಕರ್ತೆಯ ಮುಂದಿಡಲಾಗಿತ್ತು. ಆಕೆ ಎರಡನೇ ಆಯ್ಕೆಯನ್ನು ಒಪ್ಪಿಕೊಂಡಿದ್ದಳು ಮತ್ತು ಅದು ಫಲ ನೀಡಿತ್ತು. 2002ರ ಗುಜರಾತ್ ಗಲಭೆಗಳ ವಿಚಾರಣೆ ನಡೆಸುತ್ತಿದ್ದ ಆಯೋಗದ ಮುಂದೆ ಈ ನ್ಯಾಯವಾದಿ ಯಾವುದೇ ಸೂಕ್ಷ್ಮ ವಿಷಯದ ಹಿಂದೆ ಬೀಳದಂತೆ ಮಾಡುವಲ್ಲಿ ಆಕೆ ಯಶಸ್ವಿಯಾಗಿದ್ದಳು" ಎಂದು ಭಟ್ ಬರೆದಿದ್ದಾರೆ.

"ಅಸಹಾಯಕ ಸಂತ್ರಸ್ತರ ಏಕಮಾತ್ರ ಕಾನೂನು ಪ್ರತಿನಿಧಿಯಾಗಿದ್ದರೂ ಈ ನ್ಯಾಯವಾದಿ ಆಯೋಗದ ವಿಚಾರಣೆಯಿಂದ ಸಂಪೂರ್ಣವಾಗಿ ಹಿಂದೆ ಸರಿದಿದ್ದ. ಪತ್ರಕರ್ತೆ ತನ್ನ ತನಿಖೆಯ ಕುರಿತು ಪುಸ್ತಕವನ್ನು ಬರೆದಿದ್ದಳು, ಆದರೆ ಗುಜರಾತ್ ಹತ್ಯಾಕಾಂಡದ ಸಂಚಿನಲ್ಲಿ ಮುಖ್ಯಮಂತ್ರಿಗಳ ಪಾತ್ರವನ್ನು ಮರೆಮಾಚುವ ಕಾಳಜಿ ವಹಿಸಿದ್ದಳು. ಇದಕ್ಕೆ ಪ್ರತಿಯಾಗಿ ಯಾವುದೇ ಅಡ್ಡಿಯನ್ನುಂಟು ಮಾಡದೆ ಪುಸ್ತಕ ಪ್ರಕಟಣೆಗೆ ಅವಕಾಶ ನೀಡಲಾಗಿದೆ" ಎಂದೂ ಭಟ್ ವಿವರಿಸಿದ್ದಾರೆ.

"ಇದು ಉಭಯ ರಾಜಕಾರಣಿಗಳಿಗೆ ರಾಜಕೀಯ ಮಾರ್ಗದ ಅಂತ್ಯವಾಗುತ್ತಿತ್ತು ಮತ್ತು ಪತ್ರಕರ್ತೆಗೆ ಪತ್ರಿಕೋದ್ಯಮದ ಹಾದಿಯು ಬಾಗಿಲು ಮುಚ್ಚಿಕೊಳ್ಳುತ್ತಿತ್ತು. ಹೀಗಾಗಿ ಈ ರಾಜಿಯು ಇಬ್ಬರಿಗೂ ಲಾಭದಾಯಕವಾಗಿದೆ" ಎಂದು ಭಟ್ ಹೇಳಿದ್ದಾರೆ.

ಗುಜರಾತ್ ಗಲಭೆಯಲ್ಲಿ ಮೋದಿ ಕೈವಾಡವಿದೆ ಎಂದು ಆರೋಪಿಸಿ ಭಟ್ 2011 ಎಪ್ರಿಲ್‌ನಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಮಾಣಪತ್ರ ಸಲ್ಲಿಸಿದ ಬಳಿಕ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು, ಬಳಿಕ ವಜಾಗೊಳಿಸಲಾಗಿತ್ತು.

ಸಂಜೀವ್ ಭಟ್ ಹಾಕಿರುವ ಸ್ಪೋಟಕ ಫೇಸ್ ಬುಕ್ ಪೋಸ್ಟ್ ಇಲ್ಲಿದೆ: 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News