ಅರ್ನಬ್ ರ 'ಫೇಕು' ವೀಡಿಯೋದ ಬಂಡವಾಳ ಬಯಲು ಮಾಡಿದ ರಾಜದೀಪ್

Update: 2017-09-19 18:05 GMT

ಹೊಸದಿಲ್ಲಿ, ಸೆ. 19 : ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಮಂಗಳವಾರ ಬೆಳ್ಳಂಬೆಳಗ್ಗೆ ದೊಡ್ಡ ಮುಜುಗರಕ್ಕೀಡಾಗಿದ್ದಾರೆ. 

ಎರಡು ವರ್ಷಗಳ ಹಿಂದೆ ಗೋಸ್ವಾಮಿ ಮಾಡಿರುವ ಭಾಷಣವೊಂದರ ವೀಡಿಯೊವನ್ನು ಟ್ವೀಟ್ ಮಾಡಿದ ಅವರ ಮಾಜಿ ಸಹೋದ್ಯೋಗಿ, ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರು " ನನ್ನ ಮಿತ್ರ 2002 ರಲ್ಲಿ ಗುಜರಾತ್ ಸಿಎಂ ನಿವಾಸದ ಸಮೀಪ ತನ್ನ ಕಾರಿನ ಮೇಲೆ ದಾಳಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಆದರೆ ಅವರು ಆ ಗಲಭೆ ವರದಿ ಮಾಡಲು ಹೋಗಿರಲೇ ಇಲ್ಲ " ಎಂದು ಹೇಳಿದ್ದಾರೆ. 

ಗೋಸ್ವಾಮಿ ವಿರುದ್ಧ " ಫೇಕು " ಎಂದೇ ವಾಗ್ದಾಳಿ ನಡೆಸಿರುವ ರಾಜದೀಪ್ ನನಗೆ ಇವತ್ತು ನನ್ನ ವೃತ್ತಿಯ ಬಗ್ಗೆಯೇ ನಾಚಿಕೆಯಾಗಿದೆ ಎಂದು ಹೇಳಿದ್ದಾರೆ. 

ಸರ್ದೇಸಾಯಿ ಆ ವೀಡಿಯೊವನ್ನು ಮತ್ತೆ ಡಿಲೀಟ್ ಮಾಡಿದ್ದಾರಾದರೂ ಆ ವೀಡಿಯೊ ಯೂಟ್ಯೂಬ್ ನಲ್ಲಿ ಲಭ್ಯವಿದೆ. " ತ್ರಿಶೂಲ ಹಿಡಿದುಕೊಂಡ ಜನರು ನಮ್ಮ ಮೇಲೆ ದಾಳಿ ಮಾಡಿ ನಮ್ಮ ಗುರುತು ವಿವರ ಕೇಳಿದರು. ನನ್ನ ಬಳಿ ಪ್ರೆಸ್ ಕಾರ್ಡ್ ಇತ್ತು. ಆದರೆ ಚಾಲಕನ ಬಳಿ ಇರಲಿಲ್ಲ. ಆದರೆ ಅವನ ಕೈಯಲ್ಲಿ ಹೇ ರಾಮ್ ಎಂದು ಟ್ಯಾಟೂ ಇದ್ದುದರಿಂದ ನಮ್ಮನ್ನು ಹೋಗಲು ಬಿಟ್ಟರು " ಎಂದು ಅಸ್ಸಾಂ ನಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಮಾಡಿದ್ದ ಭಾಷಣದಲ್ಲಿ  ಗೋಸ್ವಾಮಿ ಹೇಳಿರುವುದು ವೀಡಿಯೋದಲ್ಲಿ ಕಾಣುತ್ತದೆ. 

" ನಿಜವಾಗಿ ಅಂದು ದಾಳಿ ನಡೆದಿದ್ದು ನಿಮ್ಮ ಮೇಲಲ್ಲವೇ " ಎಂದು ಒಬ್ಬ ಟ್ವಿಟ್ಟರ್ ಬಳಕೆದಾರ ಕೇಳಿದ್ದಕ್ಕೆ ರಾಜದೀಪ್ ಹೌದು ಎಂದು ಖಚಿತಪಡಿಸಿದ್ದಾರೆ. " ಪತ್ರಕರ್ತನಾಗಿ ಸಹೋದ್ಯೋಗಿ ಮೇಲೆ ಇಂತಹ ಆರೋಪ ಏಕೆ ಮಾಡುತ್ತೀರಿ " ಎಂದು ಇನ್ನೊಬ್ಬ ಕೇಳಿದ್ದಕ್ಕೆ " ಸತ್ಯವನ್ನು ಜನರ ಮುಂದಿಡುವುದು ಅಗತ್ಯ " ಎಂದು ರಾಜದೀಪ್ ಪ್ರತಿಕ್ರಿಯೆ ನೀಡಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News