ಜಗದೀಶ್ ಕಾರಂತ್ ವಿರುದ್ಧ ಯಾಕೆ ಇನ್ನೂ ದೂರು ದಾಖಲಿಸಿಲ್ಲ ಎಂದು ಎಸ್ಪಿಯನ್ನು ಪ್ರಶ್ನಿಸಿದ ಗೃಹ ಸಚಿವರು

Update: 2017-09-20 10:01 GMT

ಮಂಗಳೂರು, ಸೆ. 20: ಸಂಪ್ಯ ಠಾಣೆಯ ಪೊಲೀಸ್ ಅಧಿಕಾರಿಗಳನ್ನು ನಿಂದಿಸಿ, ಬಹಿರಂಗ ಬೆದರಿಕೆ ಹಾಕಿದ್ದ ಜಗದೀಶ್ ಕಾರಂತ್ ವಿರುದ್ಧ ಇನ್ನೂ ಯಾವುದೇ ದೂರು ದಾಖಲಿಸದ ಬಗ್ಗೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದರು.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪಶ್ಚಿಮ ವಲಯ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿಯವರನ್ನು ಈ ಬಗ್ಗೆ ಪ್ರಶ್ನಿಸಿದರು.

ಈ ಬಗ್ಗೆ ಕಾನೂನು ಅಭಿಪ್ರಾಯವನ್ನು ಪಡೆಯಲಾಗುತ್ತಿದೆ ಎಂದು ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದಾಗ, "ಇಂತಹದ್ದಕ್ಕೆಲ್ಲಾ ಅಭಿಪ್ರಾಯಕ್ಕೆ ಕಾಯುವ ಅಗತ್ಯವಿಲ್ಲ. ಯಾವ ರಾಜಕೀಯ ಪಕ್ಷವೇ ಆಗಿದ್ದರೂ, ಯಾವುದೇ ಸಂಘಟನೆ ಆಗಿದ್ದರೂ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಾಗಿದೆ. ಇಂತಹ ಘಟನೆಗಳನ್ನು ಮುಂದುವರಿಸಲು ಬಿಟ್ಟರೆ, ಅದು ದೊಡ್ಡದಾಗಿ ಬೆಳೆಯುತ್ತದೆ ಮತ್ತು ಬೇರೆಯವರಿಗೆ ಸಲುಗೆ ಆಗುತ್ತದೆ. ಅವರು ಮಾತಾಡಿದ್ದಾರೆಂದು ಇನ್ನೊಬ್ಬರು ಮಾತನಾಡುತ್ತಾರೆ. ಇದಕ್ಕೆ ಅವಕಾಶವೇ ನೀಡಬಾರದು. ಕಠಿಣವಾಗಿ ಕ್ರಮವಾಗಬೇಕು" ಎಂದರು.

ಪ್ರಚೋದನಕಾರಿ ಭಾಷಣ ಮಾಡುವವರ ಬಗ್ಗೆ ಇಲಾಖೆಗೆ ಮಾಹಿತಿ ಇರುತ್ತದೆ. ಅವರಿಗೆ ಅವಕಾಶ ನೀಡದಂತೆ ತಡೆಯಬಹುದಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಚೋದನಕಾರಿ ಭಾಷಣ ಮಾಡುವವರಿದ್ದರೆ, ಅದನ್ನು ಪರಿಶೀಲಿಸಿ, ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಮೋಹನ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News