ಧಾರ್ಮಿಕ ಶಿಕ್ಷಣದಿಂದ ಮಾನವೀಯ ಮೌಲ್ಯ ವೃದ್ಧಿ : ಸಿರಾಜುದ್ದೀನ್ ಖಾಸಿಮಿ

Update: 2017-09-20 12:42 GMT

ಪುತ್ತೂರು,ಸೆ.20 : ತಂತ್ರಜ್ಞಾನಗಳು ಮುಂದುವರೆದಂತೆ ಮಾನವರು ಅಧ:ಪತನದತ್ತ ಸಾಗುತ್ತಿದ್ದು, ಮಾನವೀಯ ಸಂಬಂಧಗಳು ದೂರವಾಗುತ್ತಿದೆ. ಕೌಟುಂಬಿಕ ಜೀವನಕ್ಕೂ ಬೆಲೆ ಕಲ್ಪಿಸದ ಸ್ಥಿತಿ ಬಂದಿದೆ. ಇದಕ್ಕೆ ಪರಿಹಾರ ಎಂಬಂತೆ ತಮ್ಮ ಮಕ್ಕಳಿಗೆ ಲೌಕಿಕ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ವೃದ್ಧಿಸಬಲ್ಲ ಧಾರ್ಮಿಕ ಶಿಕ್ಷಣವನ್ನು ನೀಡಬೇಕಾಗಿರುವುದು ಪೋಷಕರ ಜವಾಬ್ದಾರಿಯಾಗಿದೆ. ಮಾನವೀಯ ಶಿಕ್ಷಣ ಇಂದಿನ ಅನಿವಾರ್ಯವೂ ಆಗಿದೆ ಎಂದು ಸಿರಾಜುದ್ದೀನ್ ಅಲ್ ಖಾಸಿಮಿ ಕೊಲ್ಲಂ ಅವರು ಹೇಳಿದರು. 

ಪುತ್ತೂರು ತಾಲೂಕಿನ ಕುಂಬ್ರದಲ್ಲಿರುವ `ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ' ಗೆ ಬುಧವಾರ ಭೇಟಿ ನೀಡಿದ ಅವರು ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಹಾಫಿಝ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

 ಧಾರ್ಮಿಕ ಶಿಕ್ಷಣವನ್ನು ಕರಗತ ಮಾಡಿಕೊಂಡ ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳಡಿಸುತ್ತಾರೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಮಗುವಿಗೂ ಧಾರ್ಮಿಕ ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು .ಯಾವದೇ ಒಂದು ಮಗು ಆರ್ಥಿಕ ಹಿನ್ನಡೆಯ ಕಾರಣದಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಅವರು ಹೇಳಿದರು. ಕುಂಬ್ರದಲ್ಲಿರುವ ಈ ಅನಾಥ ಮಕ್ಕಳ ಸಂಸ್ಥೆಯು ನೂರಾರು ಬಡ ಮಕ್ಕಳಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಅವರು ಪ್ರಶಂಸಿಸಿದರು.  

ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯ ವ್ಯವಸ್ಥಾಪಕ ಕೆ.ಆರ್.ಹುಸೈನ್ ದಾರಿಮಿ ಅವರು ಸಂಸ್ಥೆ ನಡೆದು ಬಂದ ಹಾದಿಯನ್ನು ವಿವರಿಸಿದರು. ಸಂಸ್ಥೆಯ ಕೋಶಾಧಿಕಾರಿ ಸಾದಿಕ್ ಹಾಜಿ ಆಕರ್ಷಣ್, ಫಾರೂಕ್ ಉಳ್ಳಾಲ್, ಸಂಸ್ಥೆಯ ಪ್ರೊಫೆಸರ್ ಅನೀಸ್ ಕೌಸರಿ, ರಶೀದ್ ಹಾಜಿ ಪರ್ಲಡ್ಕ, ಸಂಪ್ಯ ಮುದರ್ರಿಸ್ ಅಬ್ದುಲ್ ಹಮೀದ್ ದಾರಿಮಿ, ಅಬೂಬಕ್ಕರ್ ಮುಲಾರ್, ಮಹಮ್ಮದ್ ಸಾಬ್ ಕೂರ್ನಡ್ಕ, ಇಬ್ರಾಹಿಂ ಹಾಜಿ ಕತ್ತರ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News