ನಮ್ಮ ಹೇಳಿಕೆಗೆ ಇಂದಿಗೂ ಬದ್ಧ: ಆರೋಪಿ ಖಲಂದರ್ ಕುಟುಂಬಸ್ಥರು

Update: 2017-09-21 16:15 GMT

ಮಂಗಳೂರು, ಸೆ.21: ಶರತ್ ಮಡಿವಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಖಲಂದರ್‌ನ ತಂದೆ ಹಾಗೂ ಮಾವನ ಮನೆಗೆ ಬಂಟ್ವಾಳ ನಗರ ಪೊಲೀಸರು ಸರ್ಚ್ ವಾರೆಂಟ್‌ನೊಂದಿಗೆ ದಾಳಿ ನಡೆಸಿದ ಸಂದರ್ಭ ಕುರ್‌ಆನ್‌ಗೆ ಅವಮಾನ ಮಾಡಿರುವ ಹಾಗೂ ದೌರ್ಜನ್ಯ ಎಸಗಿರುವ ಕುರಿತಾಗಿ ನೀಡಿರುವ ಹೇಳಿಕೆಗೆ ಇಂದಿಗೂ ಬದ್ಧರಾಗಿದ್ದೇವೆ ಎಂದು ಆರೋಪಿ ಖಲಂದರ್ ಪತ್ನಿ, ತಂದೆ ಹಾಗೂ ಮಾವ ಹೇಳಿದ್ದಾರೆ. 

ನಗರದ ಪ್ರೆಸ್‌ಕ್ಲಬ್‌ನಲ್ಲಿ ಪಿಯುಸಿಎಲ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಪಿ ಖಲಂದರ್ ಪತ್ನಿ ಸೌದಾ ಬಾನು, "ಪೊಲೀಸರು ಅಂದು ಸರ್ಚ್ ವಾರೆಂಟ್ ತೋರಿಸಿ ಮನೆ ತಪಾಸಣೆ ನಡೆಸಿದ್ದರು. ನಾವೂ ಸಹಕಾರ ನೀಡಿದ್ದೆವು. ಆದರೆ ಅವರು ತಪಾಸಣೆ ಸಂದರ್ಭ ಮನೆಯ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕುರ್‌ಆನ್ ಮುಟ್ಟಲು ಹೋದಾಗ ಅದನ್ನು ಮುಟ್ಟಬೇಡಿ ಎಂದು ಹೇಳಿದರೂ, ‘‘ಕೊಲೆ ಮಾಡಿ ಬರುವಾಗ ನಿಮಗೆ ಇದೆಲ್ಲಾ ಗೊತ್ತಿರಲಿಲ್ಲವೇ’’ ಎಂದು ಹೇಳಿ ಮನೆಯ ಬೇರೆ ಬೇರೆ ಕೋಣೆಯಲ್ಲಿದ್ದ ಕುರ್‌ಆನ್ ಹಾಗೂ ಮದ್ರಸ ಪುಸ್ತಕಗಳನ್ನು ನೆಲಕ್ಕೆ ಚೆಲ್ಲಿ ಹೋಗಿದ್ದಾರೆ" ಎಂದು ಆರೋಪಿಸಿದರು. 

‘‘ನನ್ನ ಗಂಡ ತಪ್ಪು ಮಾಡಿದ್ದಾರೆಂಬ ಬಗ್ಗೆ ತೀರ್ಮಾನಿಸಲು ಕಾನೂನು ಇದೆ. ಆ ಪ್ರಕಾರವಾಗಿ ಸತ್ಯ ಹೊರಬರುತ್ತದೆ. ಆದರೆ, ಪೊಲೀಸರು ಆ ರೀತಿಯಾಗಿ ತಪಾಸಣೆ, ವಿಚಾರಣೆ ನೆಪದಲ್ಲಿ ನಮ್ಮ ಮನೆ ಹಾಗೂ ಖಲಂದರ್ ತಂದೆ ಮನೆಗೆ ಬಂದು, "ಕರಾವಳಿ ಹೊತ್ತಿ ಉರಿಯಲು ನಿನ್ನ ಗಂಡನೇ ಕಾರಣ, 10 ವರ್ಷಗಳಾದರೂ ಸರಿ ಅವನನ್ನು ಹಿಡಿಯುತ್ತೇವೆ. ಇಲ್ಲವಾದರೆ ಆರೆಸ್ಸೆಸ್ಸ್‌ನವರಾದರೂ ಆತನನ್ನು ಕೊಲ್ಲುತ್ತಾರೆ" ಎಂದು ಹೇಳಿ ನಮ್ಮನ್ನು ಬೆದರಿಸುತ್ತಾರೆ. ಸಂಘಟನೆಯ ಮೂಲಕ ಕೊಲೆ ನಡೆಸಲಾಗುತ್ತದೆ ಎಂಬುದನ್ನು ಪೊಲೀಸ್ ಅಧಿಕಾರಿ ಹೇಗೆ ಹೇಳುತ್ತಾರೆ?. ನನ್ನ ಗಂಡನಿಗೆ ಯಾವುದೇ ರೀತಿಯಲ್ಲಿ ಪ್ರಾಣಾಪಾಯವಾದರೂ, ಅವರ ಮೇಲೆ ಒಂದು ಗೆರೆ ಬಿದ್ದರೂ ಅದಕ್ಕೆ ಸಬ್ ಇನ್‌ಸ್ಪೆಕ್ಟರ್ ರಕ್ಷಿತ್ ಗೌಡ ಹಾಗೂ ಪೊಲೀಸ್ ಇಲಾಖೆಯೇ ಕಾರಣ. ಇದಕ್ಕೆ ನಾನೇ ಸಾಕ್ಷಿ’’ ಎಂದು ಸೌದಾ ಬಾನು ಹೇಳಿದರು.

‘‘ಶರತ್ ಮಡಿವಾಳ ಹತ್ಯೆ ಬಗ್ಗೆ ನಮಗೂ ನೋವಿದೆ. ಆತ ಒಳ್ಳೆಯ ಹುಡುಗ. ನಮಗೆ ಸುಮಾರು 14 ವರ್ಷಗಳಿಂದ ಆತ ಹಾಗೂ ಆತನ ಮನೆಯವರೆಲ್ಲರ ಪರಿಚಯವಿದೆ. ನಾವೂ ಅವರ ಇಸ್ತ್ರಿ ಅಂಗಡಿಗೆ ಹೋಗುತ್ತಿದ್ದೆವು. ಆತನ ಹತ್ಯೆಗೆ ಕೆಲ ದಿನಗಳ ಹಿಂದೆಯಷ್ಟೇ ಖಲಂದರ್ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಮ್ಮ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ. ಇಂತಹ ಪರಿಸ್ಥಿತಿಯಲ್ಲಿ ಆತ ಕೊಲೆ ಮಾಡಲು ಸಾಧ್ಯವಿಲ್ಲ. ಕಾನೂನು ರೀತಿಯಲ್ಲಿ ಈ ಬಗ್ಗೆ ವಿಚಾರಣೆ ನಡೆಸುವುದರಲ್ಲಿ ನಮ್ಮದೇನೂ ಅಭ್ಯಂತರವಿಲ್ಲ. ಪೊಲೀಸರು ಮನೆಗೆ ಸರ್ಚ್ ವಾರೆಂಟ್ ಹಿಡಿದು ಬಂದಾಗ ನಾವು ಎಲ್ಲಾ ರೀತಿಯ ಸಹಕಾರ ನೀಡಿದ್ದೇವೆ. ಆದರೆ ನಮ್ಮ ಮಾತುಗಳಿಗೆ, ನಮಗೆ ಆಗಿರುವ ಅನ್ಯಾಯಕ್ಕೆ ಬೆಲೆಯೇ ಇಲ್ಲ. ಕುರ್‌ಆನ್ ಇಲ್ಲದಿದ್ದರೆ ನಾವು ಮನುಷ್ಯರಾಗಿರುತ್ತಿರಲಿಲ್ಲ. ಅವರು ಕುರ್‌ಆನ್ ಮುಟ್ಟಿದ್ದು ಮಾತ್ರವಲ್ಲ, ಎಸೆದಿದ್ದಾರೆ’’ ಎಂದು ಸೌದಾ ಬಾನು ತಂದೆ ಮುಹಮ್ಮದ್ ಆರೋಪಿಸಿದರು. 

ಕುರ್ ಆನ್ ಎಸೆದಿರುವ ಘಟನೆಯನ್ನು ಸೃಷ್ಟಿಸಿದ್ದಾನೆ ಎನ್ನುವ ಆರೋಪದಲ್ಲಿ ವರದಿಗಾರನನ್ನು ಬಂಧಿಸಿರುವ ಘಟನೆ ಹಾಗೂ ನಂತರ ನೀವು ಅದನ್ನು ಒಪ್ಪಿರುವುದಾಗಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದಾಗ ಉತ್ತರಿಸಿದ ಸೌದಾ ಬಾನು ತಂದೆ ಮುಹಮ್ಮದ್, “ಪತ್ರಕರ್ತ ನಮ್ಮ ಹೇಳಿಕೆಯನ್ನೇ ವರದಿ ಮಾಡಿದ್ದಾನೆ. ಪತ್ರಕರ್ತ ತಪ್ಪಾಗಿ ವರದಿ ಮಾಡಿಲ್ಲ ಹಾಗೂ ಏನನ್ನೂ ಸೃಷ್ಟಿಸಿಲ್ಲ. ನಮಗೆ ಏನು ಮಾಡಿದ್ದಾರೋ ಅದನ್ನೇ ನಾವು ಹೇಳುತ್ತಿದ್ದೇವೆ. ನಿನ್ನೆಯೂ ಅದನ್ನೇ ಹೇಳಿದ್ದೇವೆ. ಇಂದೂ ಅದನ್ನೇ ಹೇಳುತ್ತೇವೆ. ಪೊಲೀಸರು ಸುಳ್ಳು ಹೇಳುತ್ತಾರೆಯೇ ಹೊರತು ಸತ್ಯವನ್ನು ಹೇಳುತ್ತಿಲ್ಲ ಎಂದು ಹೇಳಿದರು.

‘‘ಪೊಲೀಸರು ಅವರಿಗೆ ಬೇಕಾದದ್ದನ್ನು ಮಾಡುತ್ತಾರೆ. ಮಾಧ್ಯಮವದರಿಗೂ ಬೆಲೆ ಇಲ್ಲದಿರುವಾಗ ನಮ್ಮ ಅನ್ಯಾಯವನ್ನು ಕೇಳುವವರು ಯಾರು?’’ ಎಂದು ಮುಹಮ್ಮದ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಖಲಂದರ್ ತಂದೆ ಇಬ್ರಾಹೀಂ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News