'ವಾರ್ತಾಭಾರತಿ' ವಿರುದ್ಧದ ಪ್ರಕರಣ ಹಿಂಪಡೆಯಬೇಕು, ಎಸ್ಸೈ ವಿರುದ್ಧ ಎಫ್‌ಐಆರ್ ದಾಖಲಿಸಬೇಕು

Update: 2017-09-21 12:19 GMT

ಮಂಗಳೂರು, ಸೆ.21: "ಶರತ್ ಮಡಿವಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಖಲಂದರ್ ಮನೆಗೆ ಪೊಲೀಸರು ನಡೆಸಿದ ದಾಳಿಯ ಕುರಿತು ವರದಿ ಮಾಡಿದ್ದ ‘ವಾರ್ತಾಭಾರತಿ’ ಪತ್ರಿಕೆಯ ವರದಿಗಾರನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವಂತಹ ಪರಿಸ್ಥಿತಿಯನ್ನು ಪೊಲೀಸರು ಮಾಡಿದ್ದಾರೆ. ಇದು ಖಂಡನೀಯ, ಪತ್ರಕರ್ತ ಹಾಗೂ ಪತ್ರಿಕೆಯ ಸಂಪಾದಕರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಪೊಲೀಸರು ಹಿಂಪಡೆಯಬೇಕು" ಎಂದು ಪಿಯುಸಿಎಲ್‌ನ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಬಿ.ಡೇಸಾ ಆಗ್ರಹಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಿಯುಸಿಲ್‌ನಿಂದ ಸತ್ಯಶೋಧನಾ ವರದಿಯ ಕುರಿತಂತೆ ಮಾತನಾಡಿದ ಅವರು, "ಪಿಯುಸಿಎಲ್‌ನ ಮಂಗಳೂರು ಘಟಕದ ಪ್ರತಿನಿಧಿಗಳು ಸೆ.17ರಂದು ಆರೋಪಿ ಖಲಂದರ್ ನ ತಂದೆ ಇಬ್ರಾಹೀಂ ಹಾಗೂ ಮಾವ ಮುಹಮ್ಮದ್ ಅವರ ಮನೆಗಳಿಗೆ ಭೇಟಿ ನೀಡಿ ಮನೆಯವರ ಜತೆ ಮಾತನಾಡಿ ಮಾಹಿತಿ ಸಂಗ್ರಹಿಸಿದ್ದೇವೆ. ಆರೋಪಿ ಖಲಂದರ್ ತಂದೆ ಮತ್ತು ಮಾವ ಮರದ ವ್ಯವಹಾರ ನಡೆಸುತ್ತಿದ್ದಾರೆ. ಅವರ ಎಲ್ಲಾ ಮಕ್ಕಳು ಸುಶಿಕ್ಷಿತರು ಮತ್ತು ಒಬ್ಬ ಮಗ ಕುವೈತ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ (ಬಿಇ) ಆಗಿ ಕೆಲಸ ಮಾಡುತ್ತಿದ್ದಾನೆ. ಖಲಂದರ್ ಕೂಡಾ ಪಿಯುಸಿಯವರೆಗೆ ಓದಿದ್ದಾನೆ. ಆತನ ಪತ್ನಿ ಸೌದಾ ಬಾನು ಸಮೀಪದ ಶಾಲೆಯೊಂದರ ಶಿಕ್ಷಕಿ. ಓರ್ವ ಸಹೋದರಿ ಎಂಎ ಎಲ್.ಎಲ್.ಬಿ. ಪದವೀಧರೆ".

"ಪೊಲೀಸರು ಅಂದು ಸರ್ಚ್ ವಾರೆಂಟ್ ಹಿಡಿದು ಬೆಳಗ್ಗೆ 7:30ರ ಸುಮಾರಿಗೆ ಸೌದಾ ಬಾನು ತಂದೆ ಮನೆಗೆ ದಾಳಿ ನಡೆಸಿದ್ದರು. ಪೊಲೀಸರು ತಪಾಸಣೆಯ ವೇಳೆ ಕುರ್‌ಆನನ್ನು ನೆಲಕ್ಕೆ ಎಸೆಯುವುದನ್ನು ಹೊರತುಪಡಿಸಿ ಬಾಕಿ ಎಲ್ಲಾ ಪ್ರಕ್ರಿಯೆಗಳನ್ನು ವೀಡಿಯೊ ಮಾಡಿದ್ದಾರೆ. ಆರೋಪಿ ಖಲಂದರ್ ಮಾವನ ಮನೆಯ ತಪಾಸಣೆ ಬಳಿಕ ಸುಮಾರು 10:30ರ ವೇಳೆಗೆ ತಂದೆ ಇಬ್ರಾಹೀಂ ಅವರ ಮನೆಗೂ ತೆರಳಿ ತಪಾಸಣೆ ನಡೆಸಿದ್ದರು. ಎರಡೂ ಮನೆಗಳಲ್ಲೂ ಮಕ್ಕಳ ಮದ್ರಸ ಪುಸ್ತಕಗಳು ಹಾಗೂ ಇತರ ಶಾಲಾ ಪುಸ್ತಕಗಳು ಸೇರಿದಂತೆ ಕುರ್‌ಆನ್ ಗ್ರಂಥವನ್ನು ಕಪಾಟಿನಲ್ಲಿ ಗೌರವಯುತವಾಗಿ ಇರಿಸಲಾಗಿತ್ತು. ಇನ್‌ಸ್ಪೆಕ್ಟರ್ ರಕ್ಷಿತ್ ಗೌಡ ಮನೆಯವರ ಜತೆ ನಿಂದನಾತ್ಮಕವಾಗಿ ಮಾತನಾಡಿದ್ದಲ್ಲದೆ, ಮನೆಯವರ ವಿರೋಧದ ನಡುವೆಯೂ ಕುರ್‌ಆನ್‌ಗೆ ಅವಮಾನ ಮಾಡಿರುವುದು ನಮ್ಮ ಸತ್ಯಶೋಧನೆಯ ವೇಳೆ ತಿಳಿದು ಬಂದಿದೆ’’ ಎಂದು ಡೇಸಾ ಹೇಳಿದರು.

"ತಪಾಸಣೆಯ ಸಂದರ್ಭ ಆಗಿರುವ ಪೊಲೀಸ್ ದೌರ್ಜನ್ಯದ ಕುರಿತು ಸೌದಾ ಬಾನು ಸೆಪ್ಟಂಬರ್ 4ರಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಮಾತ್ರವಲ್ಲದೆ ಪೊಲೀಸ್ ದೌರ್ಜನ್ಯದ ಕುರಿತಂತೆ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೂ ಜಿಲ್ಲಾಧಿಕಾರಿ ಮೂಲಕ ದೂರು ನೀಡಲಾಗಿದೆ. ಸರ್ಚ್ ವಾರೆಂಟ್ ಇರುವ ಹೊರತಾಗಿ ಪೊಲೀಸರು ಮನೆಯವರ ಜತೆ ಅನಾಗರಿಕವಾಗಿ ವರ್ತಿಸುವಂತಿಲ್ಲ. ಆದ್ದರಿಂದ ಎಸ್ಸೈ ರಕ್ಷಿತ್ ಗೌಡ ವಿರುದ್ಧ ಎಫ್‌ಐಆರ್ ದಾಖಲಿಸಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು" ಎಂದವರು ಆಗ್ರಹಿಸಿದರು.

"ಸರ್ಚ್ ವಾರೆಂಟ್ ಹಿಡಿದು ಪೊಲೀಸರು ನಡೆಸಿದ ತಪಾಸಣೆಯ ವೇಳೆ ಆರೂವರೆ ಗಂಟೆ ವೀಡಿಯೋ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದು, ಅದರಲ್ಲಿ ಮೂರು ನಿಮಿಷಗಳ ವಿಡಿಯೋವನ್ನು ಮಾನವ ಹಕ್ಕು ಆಯೋಗದ ಸದಸ್ಯರಿಗೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತೋರಿಸಿದ್ದಾರೆ. ಆದರೆ ಪೊಲೀಸರು ತಾವು ಮಾಡಿರುವ ದೌರ್ಜನ್ಯವನ್ನು ವೀಡಿಯೋ ಮಾಡಿರಲು ಸಾಧ್ಯವಿಲ್ಲ. ಒಂದು ಮನೆಯಲ್ಲಿ 15ರಷ್ಟು ಪೊಲೀಸ್ ಸಿಬ್ಬಂದಿ ತೆರಳಿದ್ದ ಸಂದರ್ಭದಲ್ಲಿ ವಿವಿಧ ಕೋಣೆಗಳಲ್ಲಿ ನಡೆಯುವ ತಪಾಸಣಾ ಪ್ರಕ್ರಿಯೆಗಳನ್ನು ಏಕಕಾಲದಲ್ಲಿ ವೀಡಿಯೋ ಮಾಡಲು ಸಾಧ್ಯವಿಲ್ಲ. ಮಾತ್ರವಲ್ಲದೆ, ತಮಗೆ ಬೇಕಿರುವುದನ್ನು ಮಾತ್ರವೇ ಪೊಲೀಸರು ವೀಡಿಯೋ ಮಾಡಿ ಹಿರಿಯ ಅಧಿಕಾರಿಗಳಿಗೆ ಒಪ್ಪಿಸಿರುತ್ತಾರೆ" ಎಂದು ಪಿಯುಸಿಎಲ್ ಜಿಲ್ಲಾಧ್ಯಕ್ಷ ಕಬೀರ್ ಉಳ್ಳಾಲ್ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News