ರೈಲುಗಳಲ್ಲಿ ಆಹಾರ ಪ್ರಮಾಣ, ಗುತ್ತಿಗೆದಾರನ ವಿವರಗಳನ್ನು ಹೊಂದಿರುವುದು ಕಡ್ಡಾಯ: ರೈಲ್ವೆ ಸಚಿವ

Update: 2017-09-21 12:14 GMT

ಹೊಸದಿಲ್ಲಿ,ಸೆ.21: ರೈಲುಗಳಲ್ಲಿ ಪ್ರಯಾಣಿಕರಿಗೆ ಒದಗಿಸಲಾಗುವ ಊಟದ ತೂಕ, ಪ್ಯಾಕ್ ಮಾಡಲಾದ ದಿನಾಂಕ ಮತ್ತು ಸಸ್ಯಾಹಾರ ಅಥವಾ ಮಾಂಸಾಹಾರವೆಂದು ಸೂಚಿಸುವ ನಿರ್ದಿಷ್ಟ ಸಂಕೇತ ಮತ್ತು ಅದನ್ನು ಪೂರೈಸಿದ ಗುತ್ತಿಗೆದಾರನ ಹೆಸರು ಇತ್ಯಾದಿ ವಿವರಗಳನ್ನು ಕಡ್ಡಾಯವಾಗಿ ಹೊಂದಿರುವಂತೆ ನೋಡಿಕೊಳ್ಳಬೇಕೆಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಾಲಿ ರೈಲುಗಳಲ್ಲಿ ಪೂರೈಕೆಯಾಗುವ ಊಟ ಅದು ಸಸ್ಯಾಹಾರ ಅಥವಾ ಮಾಂಸಾಹಾರ ಎನ್ನುವ ಉಲ್ಲೇಖವನ್ನು ಮಾತ್ರ ಹೊಂದಿರುತ್ತದೆ.

ರೈಲ್ವೆ ಮಂಡಳಿಯ ಹೆಚ್ಚುವರಿ ಸದಸ್ಯ(ಪ್ರವಾಸೋದ್ಯಮ ಮತ್ತು ಕೇಟರಿಂಗ್) ಸಂಜೀವ್ ಗರ್ಗ್ ಅವರು ಬುಧವಾರ ಎಲ್ಲ ರೈಲ್ವೆ ವಲಯ ಮಹಾ ಪ್ರಬಂಧಕರಿಗೆ ಬರೆದಿರುವ ಪತ್ರದಲ್ಲಿ ಸಚಿವರ ಆದೇಶವನ್ನು ತಿಳಿಸಿ, ತಕ್ಷಣದಿಂದಲೇ ಪಾಲಿಸುವಂತೆ ಸೂಚಿಸಿದ್ದಾರೆ.

ಗೋಯಲ್ ಅವರ ನಿರ್ದೇಶದ ಮೇರೆಗೆ ಇತ್ತೀಚಿಗಷ್ಟೇ ರೈಲ್ವೆ ಮಂಡಳಿಯು ಪ್ರಯಾಣಿಕರಿಂದ ಹೆಚ್ಚಿನ ಶುಲ್ಕವನ್ನು ವಸೂಲು ಮಾಡುತ್ತಿರುವ ಕೇಟರಿಂಗ್ ಗುತ್ತಿಗೆದಾರರು ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮಗಳನ್ನು ಜರುಗಿಸುವಂತೆ ಎಲ್ಲ ರೈಲ್ವೆ ವಲಯ ಮಹಾ ಪ್ರಬಂಧಕರಿಗೆ ಪತ್ರ ಬರೆದಿತ್ತು. ಪ್ರಯಾಣಿಕರಿಗೆ ಶುಚಿಯಾದ ಮತ್ತು ಉತ್ತಮ ಗುಣಮಟ್ಟದ ಆಹಾರ ಪೂರೈಕೆಗೆ ಒತ್ತು ನೀಡುವಂತೆಯೂ ಪತ್ರದಲ್ಲಿ ಸೂಚಿಸಲಾಗಿತ್ತು.

ಈ ವರ್ಷದ ಆರಂಭದಲ್ಲಿ ಮಹಾ ಲೇಖಪಾಲರು ರೈಲುಗಳಲ್ಲಿ ಪೂರೈಸಲಾಗುವ ಊಟದ ಬಗ್ಗೆ ಗಂಭೀರ ಟೀಕೆಗಳನ್ನು ಮಾಡಿದ್ದ ಹಿನ್ನೆಲೆಯಲ್ಲಿ ಇಲಾಖೆಯು ಈ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News