ಬೆನಝೀರ್ ಭುಟ್ಟೋ ಹತ್ಯೆಯ ಸೂತ್ರಧಾರಿ ಆಸಿಫ್ ಅಲಿ ಝರ್ದಾರಿ

Update: 2017-09-21 15:02 GMT

ಹೊಸದಿಲ್ಲಿ, ಸೆ,21: ಬೆನಝೀರ್ ಭುಟ್ಟೋ ಹಾಗೂ ಅವರ ಸಹೋದರ ಮುರ್ತಝಾ ಭುಟ್ಟೋ ಹತ್ಯೆಯಲ್ಲಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ನಾಯಕ ಆಸಿಫ್ ಅಲಿ ಝರ್ದಾರಿ ಶಾಮೀಲಾಗಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಝ್ ಮುಷರ್ರಫ್ ಆರೋಪಿಸಿದ್ದಾರೆ.

ಭುಟ್ಟೋ ಹತ್ಯಾ ಪ್ರಕರಣದಲ್ಲಿ ಮುಷರ್ರಫ್ ತಲೆಮರೆಸಿಕೊಂಡಿರುವ ಆರೋಪಿ ಎಂದು ಭಯೋತ್ಪಾದನೆ ನಿಗ್ರಹ ನ್ಯಾಯಾಲಯ ಘೋಷಿಸಿದ 3 ವಾರಗಳ ನಂತರ ವಿಡಿಯೋ ಸಂದೇಶವೊಂದರಲ್ಲಿ ಮುಷರ್ರಫ್ ಈ ಆರೋಪ ಮಾಡಿದ್ದಾರೆ.

“ಭುಟ್ಟೋ ಕುಟುಂಬದಲ್ಲಿ ನಡೆದ ಎಲ್ಲಾ ದುರಂತಗಳು ಹಾಗೂ ಬೆನಝೀರ್ ಮತ್ತು ಮುರ್ತಝಾ ಹತ್ಯೆಗೆ ಝರ್ದಾರಿ ಜವಾಬ್ದಾರರು” ಎಂದು ಮುಷರ್ರಫ್ ಹೇಳಿದ್ದಾರೆ. ”ಬೆನಝೀರ್ ಹಾಗೂ ಮುರ್ತಝಾ ಹತ್ಯೆ ಪ್ರಕರಣದ ತನಿಖೆಯಲ್ಲಿ ಝರ್ದಾರಿ ಯಾವುದೇ ಕೆಲಸ ಮಾಡಿಲ್ಲ ಹಾಗೂ ಅಧ್ಯಕ್ಷ ಹುದ್ದೆಯನ್ನು ಅವರು 5 ವರ್ಷಗಳ ಕಾಲ ಅನುಭವಿಸಿದರು’ ಎಂದವರು ಹೇಳಿದ್ದಾರೆ.

“ಕಗ್ಗೊಲೆಯನ್ನು ಅವರೇ ನಡೆಸಿರುವುದರಿಂದ ಪ್ರಕರಣವನ್ನು ಅವರು ಯಾಕೆ ತನಿಖೆ ಮಾಡಬೇಕು ?, ಹತ್ಯೆಯ ನಂತರ ನಾನು ಎಲ್ಲವನ್ನೂ ಕಳೆದುಕೊಳ್ಳಬೇಕಾಯಿತು. ಆಕೆಯನ್ನು ಕೊಂದವರೇ ಇದರಿಂದ ಲಾಭ ಪಡೆದುಕೊಂಡರು” ಎಂದು ಮುಷರ್ರಫ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News