ಅಧ್ಯಾಪಕಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

Update: 2017-09-21 15:20 GMT

ಗೋರಖ್‌ಪುರ್, ಸೆ. 21: ಅಧ್ಯಾಪಕಿ ಶಿಕ್ಷೆ ನೀಡಿದರು ಎಂಬ ಕಾರಣಕ್ಕೆ ಐದನೇ ತರಗತಿಯ ಬಾಲಕನೋರ್ವ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.

 ರೈಲ್ವೇ ಡೈರಿ ಕಾಲನಿಯ ಸಂತ ಆಂಟೊನಿ ಕಾನ್ವೆಂಟ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ ನವನೀತ್ ಪ್ರಕಾಶ್ ಸೆಪ್ಟಂಬರ್ 15ರಂದು ವಿಷ ಕುಡಿದಿದ್ದು, ಆತನನ್ನು ಬಿಆರ್‌ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬುಧವಾರ ಆತ ಮೃತಪಟ್ಟಿದ್ದಾನೆ.

ಬಾಲಕನ ಶಾಲಾ ಬ್ಯಾಗ್‌ನಲ್ಲಿ ಸುಸೈಡ್ ನೋಟ್ ಪತ್ತೆಯಾಗಿದ್ದು, ಇದರಲ್ಲಿ, ಅಧ್ಯಾಪಕಿ ತನಗೆ ಕಠಿಣ ಶಿಕ್ಷೆ ನೀಡಿರುವುದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾನೆ.

 “ಅಧ್ಯಾಪಕಿಯೋರ್ವರು ನನ್ನನ್ನು ಮೂರು ಗಂಟೆಗಳ ಕಾಲ ಟೇಬಲ್ ಮೇಲೆ ನಿಲ್ಲಿಸಿದ್ದರು. ನಾನು ಇಂದು ನನ್ನ ಬದುಕನ್ನು ಅಂತ್ಯಗೊಳಿಸುತ್ತಿದ್ದೇನೆ. ಯಾವುದೇ ವಿದ್ಯಾರ್ಥಿಗೆ ಇಂತಹ ಶಿಕ್ಷೆ ನೀಡದಿರುವಂತೆ ನನ್ನ ಟೀಚರ್ ಹೇಳಿ” ಎಂದು ನವನೀತ್ ಪ್ರಕಾಶ್ ಸುಸೈಡ್ ನೋಟ್‌ನಲ್ಲಿ ಬರೆದಿದ್ದಾನೆ.

ಪುತ್ರ ಆತ್ಮಹತ್ಯೆ ಮಾಡಿಕೊಳ್ಳಲು ಶಾಲೆಯ ಆಡಳಿತ ಮಂಡಳಿ ಕಾರಣ ಎಂದು ಆರೋಪಿಸಿರುವ ಹೆತ್ತವರು ಶಾಲಾ ಕಟ್ಟಡದತ್ತ ಕಲ್ಲುಗಳನ್ನು ತೂರಿದ್ದಾರೆ. ಇದಕ್ಕೆ ಪ್ರತಿಯಾಗಿ ಶಾಲೆಯ ಸಿಬ್ಬಂದಿ ಕೂಡ ಕಲ್ಲುಗಳನ್ನು ತೂರಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News