ಮ್ಯಾನ್ಮಾರ್‌ಗೆ ಚೀನಾದಿಂದ 9.54 ಲಕ್ಷ ಕೋಟಿ ರೂ. ನೆರವು

Update: 2017-09-21 17:21 GMT

ಬೀಜಿಂಗ್, ಸೆ. 21: ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುನೆಲೆಗೊಳಿಸಲು ಆ ದೇಶಕ್ಕೆ 147 ಬಿಲಿಯ ಡಾಲರ್ (ಸುಮಾರು 9.54 ಲಕ್ಷ ಕೋಟಿ ರೂಪಾಯಿ) ನೆರವು ನೀಡುವುದಾಗಿ ಚೀನಾ ಘೋಷಿಸಿದೆ.

ಆ ರಾಜ್ಯದಲ್ಲಿ ಮ್ಯಾನ್ಮಾರ್ ಸೇನೆ ನಡೆಸುತ್ತಿರುವ ದಮನ ಕಾರ್ಯಾಚರಣೆಯ ಹಿನ್ನಲೆಯಲ್ಲಿ ಲಕ್ಷಾಂತರ ಅಲ್ಪಸಂಖ್ಯಾತ ರೊಹಿಂಗ್ಯ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ರಖೈನ್‌ನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಚೀನಾವು ಮ್ಯಾನ್ಮಾರ್‌ಗೆ ನಿರಂತರವಾಗಿ ಸಹಾಯ ಮಾಡುವುದು ಎಂದು ಮ್ಯಾನ್ಮಾರ್‌ಗೆ ಚೀನಾ ರಾಯಭಾರಿ ಹಾಂಗ್ ಲಿಯಾಂಗ್ ಎಂದು ಹೇಳಿದ್ದಾರೆ.

ಆಗಸ್ಟ್ 25ರಂದು ರೊಹಿಂಗ್ಯ ಬಂಡುಕೋರರ ತಂಡವೊಂದು ರಖೈನ್‌ನಲ್ಲಿರುವ ಪೊಲೀಸ್ ಮತ್ತು ಸೇನಾ ಠಾಣೆಗಳ ಮೇಲೆ ದಾಳಿ ನಡೆಸಿದ ಬಳಿಕ ಅಲ್ಲಿನ ಸೇನೆ ರೊಹಿಂಗ್ಯಾ ಅಲ್ಪಸಂಖ್ಯಾತರ ವಿರುದ್ಧ ಭಯಾನಕ ದಮನ ಕಾರ್ಯಾಚರಣೆ ನಡೆಸುತ್ತಿದೆ.

ಸೇನೆಯ ಭೀಕರ ಹಿಂಸಾಚಾರಕ್ಕೆ ಹೆದರಿ ಸುಮಾರು 4.22 ಲಕ್ಷ ರೊಹಿಂಗ್ಯ ಮುಸ್ಲಿಮ್ ನಿರಾಶ್ರಿತರು ಈಗಾಗಲೇ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News