ಮ್ಯಾನ್ಮಾರ್‌ನಲ್ಲಿ ನೆರವು ವಾಹನಗಳ ಮೇಲೆ ಬೌದ್ಧ ಗುಂಪುಗಳಿಂದ ದಾಳಿ

Update: 2017-09-21 18:36 GMT

ಯಾಂಗನ್ (ಮ್ಯಾನ್ಮಾರ್), ಸೆ. 21: ಮ್ಯಾನ್ಮಾರ್‌ನಲ್ಲಿ ನಿರ್ವಸಿತ ರೊಹಿಂಗ್ಯ ಮುಸ್ಲಿಮರು ವಾಸಿಸುತ್ತಿದ್ದ ಸ್ಥಳವೊಂದಕ್ಕೆ ಮಾನವೀಯ ನೆರವು ಒಯ್ಯುತ್ತಿದ್ದ ವಾಹನಗಳ ಮೇಲೆ ಸ್ಥಳೀಯ ಬೌದ್ಧ ಗುಂಪುಗಳು ದಾಳಿ ನಡೆಸಿವೆ. ದುಷ್ಕರ್ಮಿಗಳನ್ನು ಚದುರಿಸಲು ಎಚ್ಚರಿಕೆ ಗುಂಡುಗಳನ್ನು ಹಾರಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಬುಧವಾರ ರಾತ್ರಿ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ (ಐಸಿಆರ್‌ಸಿ) ಕಳುಹಿಸಿದ ಅಗತ್ಯ ವಸ್ತುಗಳನ್ನು ಒಯ್ಯುತ್ತಿದ್ದ ವಾಹನಗಳ ಮೇಲೆ ಸುಮಾರು 300 ಮಂದಿಯಿದ್ದ ಗುಂಪು ಕಲ್ಲುಗಳು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ರಖೈನ್ ರಾಜ್ಯದ ರಾಜಧಾನಿ ಸಿಟ್ವೆ ನಗರದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅವರು ಹೇಳಿದರು.

ರೊಹಿಂಗ್ಯ ಬಿಕ್ಕಟ್ಟು ಕೊನೆಗೊಳಿಸಲು ವಿಶ್ವಸಂಸ್ಥೆಗೆ ಟ್ರಂಪ್ ಒತ್ತಾಯ

ಮ್ಯಾನ್ಮಾರ್‌ನ ರೊಹಿಂಗ್ಯಾ ಬಿಕ್ಕಟ್ಟನ್ನು ಕೊನೆಗೊಳಿಸಲು ‘ಬಲವಾದ ಹಾಗೂ ಕ್ಷಿಪ್ರ’ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಒತ್ತಾಯಿಸಿದ್ದಾರೆ ಎಂದು ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಬುಧವಾರ ಹೇಳಿದ್ದಾರೆ.

ಭದ್ರತಾ ಸಮಿತಿಯ ಸಭೆಯೊಂದರಲ್ಲಿ ಮಾತನಾಡಿದ ಪೆನ್ಸ್, ಪೊಲೀಸ್ ಠಾಣೆಗಳ ಮೇಲೆ ಬಂಡುಕೋರರು ನಡೆಸಿದ ದಾಳಿಗಳಿಗೆ ಮ್ಯಾನ್ಮಾರ್ ಸೇನೆಯು ‘ಭಯಾನಕ ಕ್ರೌರ್ಯದಿಂದ’ ಪ್ರತಿಕ್ರಿಯಿಸುತ್ತಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News