ದಾಳಿ ಮಾಡಬೇಕಾದ ವಿಳಾಸಕ್ಕೆ ಹೋಗದೆ ನ್ಯಾಯಾಧೀಶರ ಮನೆಗೆ ನುಗ್ಗಿದ ಸಿಬಿಐ ಅಧಿಕಾರಿಗಳು !

Update: 2017-09-21 18:23 GMT

ಹೊಸದಿಲ್ಲಿ, ಸೆ. 21: ದಾಳಿ ನಡೆಸಬೇಕಿದ್ದ ಸ್ಥಳದ ಬದಲಾಗಿ ನ್ಯಾಯಾಧೀಶರ ಮನೆಗೆ ನುಗ್ಗಿದ್ದು ಸಿಬಿಐಗೆ ಫಜೀತಿಯನ್ನುಂಟು ಮಾಡಿದೆ. ಅದರ ಅಧಿಕಾರಿಯೋರ್ವರ ವಿರುದ್ಧ ಅತಿಕ್ರಮ ಪ್ರವೇಶ ಮತ್ತು ಇತರ ಆರೋಪಗಳನ್ನು ಜಡಿಯಲಾಗಿದೆ. ಸಿಬಿಐ ಅಧಿಕಾರಿ ಗಳು ಮಂಗಳವಾರ ಭುವನೇಶ್ವರದಲ್ಲಿರುವ ಒಡಿಶಾ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶ ಐ.ಎಂ.ಖುದ್ದೂಸಿ ಅವರ ನಿವಾಸದ ಮೇಲೆ ದಾಳಿ ನಡೆಸಬೇಕಾ ಗಿತ್ತು, ಆದರೆ ಅವರು ಒಡಿಶಾ ನ್ಯಾಯಾಲಯದ ಹಾಲಿ ನ್ಯಾಯಾಧೀಶ ಚಿತ್ತಾ ಅವರ ನಿವಾಸಕ್ಕೆ ನುಗ್ಗಿದ್ದರು.

ತಮ್ಮ ತಪ್ಪಿನ ಅರಿವಾದ ಬಳಿಕ ಅಧಿಕಾರಿಗಳು ಅಲ್ಲಿಂದ ತೆರಳಿದ್ದರು ಎಂದು ಸಿಬಿಐ ಹೇಳಿಕೊಂಡಿದೆ. ಈ ಘಟನೆಯ ಬಳಿಕ ಒಡಿಶಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಡಿಜಿಪಿ ಮತ್ತು ಕಮಿಷನರ್ ಅವರನ್ನು ಕರೆಸಿದ್ದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಕಮಿಷನರ್ ವೈ.ಬಿ.ಖುರಾನಿಯಾ ಅವರು ಸಿಬಿಐ ಒಡಿಶಾ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನಿವಾಸವನ್ನು ಪ್ರವೇಶಿಸುವಾಗ ನಿಗದಿತ ಕಾರ್ಯಾಚರಣೆ ವಿಧಿವಿಧಾನಗಳನ್ನು ಅನುಸರಿಸಿರಲಿಲ್ಲ ಎಂದು ತಿಳಿಸಿದರು.

ಸಿಬಿಐ ಅಧಿಕಾರಿ ಪಿ.ಕೆ.ಮಿಶ್ರಾ ಮತ್ತು ಅವರ ತಂಡದ ವಿರುದ್ಧ ಅತಿಕ್ರಮಣ, ಸರಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಆರೋಪಗಳು ಸೇರಿದಂತೆ ಐಪಿಸಿಯ ವಿವಿಧ ಕಲಮ್‌ಗಳಡಿ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಸಿಬಿಐ ದಿಲ್ಲಿಯಲ್ಲಿರುವ ಖುದ್ದೂಸಿ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ನ್ಯಾಯಾಲಯದಲ್ಲಿರುವ ಪ್ರಕರಣವೊಂದನ್ನು ಲಕ್ನೋದ ಮೆಡಿಕಲ್ ಕಾಲೇಜೊಂದರ ಪರವಾಗಿ ಇತ್ಯರ್ಥಗೊಳಿಸಲು ಖುದ್ದೂಸಿ ಸಂಚು ಹೂಡಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಭ್ರಷ್ಟಾಚಾರದ ಮಧ್ಯವರ್ತಿ ವಿಶ್ವನಾಥ ಅಗರವಾಲ್‌ನ ಭುವನೇಶ್ವರ ನಿವಾಸ ಸೇರಿದಂತೆ ಹಲವು ಕಡೆಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ.

ಏನಿದು ಪ್ರಕರಣ ?

ನಿವೃತ್ತ ನ್ಯಾ.ಐ.ಎಂ.ಖುದ್ದೂಸಿ, ಬಿ.ಪಿ.ಯಾದವ, ಲಕ್ನೋದಲ್ಲಿ ಮೆಡಿಕಲ್ ಕಾಲೇಜು ನಡೆಸುತ್ತಿರುವ ಪ್ರಸಾದ ಶಿಕ್ಷಣ ಸಂಸ್ಥೆಯ ಪಲಾಷ್ ಯಾದವ, ವಿಶ್ವನಾಥ ಅಗರವಾಲ, ಭಾವನಾ ಪಾಂಡೆ ಮತ್ತು ಸುಧೀರ ಗಿರಿ ಅವರ ವಿರುದ್ಧ ಈ ಪ್ರಕರಣ ದಾಖಲಾಗಿದೆ.

ಮೂಲಸೌಕರ್ಯ ಕೊರತೆಯ ಕಾರಣದಿಂದ ಭಾರತೀಯ ವೈದ್ಯಕೀಯ ಮಂಡಳಿಯು ಮುಂದಿನ ಎರಡು ವರ್ಷಗಳವರೆಗೆ ಹೊಸದಾಗಿ ವಿದ್ಯಾರ್ಥಿಗಳ ಪ್ರವೇಶವನ್ನು ನಿಷೇಧಿಸಿರುವ 46 ಮೆಡಿಕಲ್ ಕಾಲೇಜುಗಳಲ್ಲಿ ಲಕ್ನೋದ ಪ್ರಸಾದ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸೇರಿದೆ. ಕಾಲೇಜು ತನ್ನ ವಿರುದ್ಧದ ನಿಷೇಧವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ.

ತನ್ನ ಸಂಪರ್ಕಗಳ ಮೂಲಕ ಪ್ರಕರಣದ ತೀರ್ಪು ಕಾಲೇಜಿನ ಪರವಾಗಿ ಹೊರ ಬೀಳುವಂತೆ ಮಾಡುವುದಾಗಿ ಖುದ್ದೂಸಿ ಭರವಸೆ ನೀಡಿದ್ದರೆನ್ನಲಾಗಿದೆ. ಮೀರತ್‌ನ ವೆಂಕಟೇಶ್ವರ ಮೆಡಿಕಲ್ ಕಾಲೇಜಿನ ಸುಧೀರ ಗಿರಿಯ ಮೂಲಕ ಆರೋಪಿ ಬಿ.ಪಿ.ಯಾದವ ನ್ಯಾ.ಖುದ್ದೂಸಿ ಮತ್ತು ಭಾವನಾ ಪಾಂಡೆ ಅವರ ಸಂಪರ್ಕವನ್ನು ಬೆಳೆಸಿದ್ದ. ಸಂಬಂಧಿಸಿದ ಹಿರಿಯ ಸರಕಾರಿ ಅಧಿಕಾರಿಗಳೊಂದಿಗೆ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದ ಮಧ್ಯವರ್ತಿ ವಿಶ್ವನಾಥ ಅಗರವಾಲ್‌ನನ್ನು ಖುದ್ದೂಸಿ ಅವರೇ ಸಂಚಿನಲ್ಲಿ ಸೇರಿಸಕೊಂಡಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News