ಎಷ್ಟೇ ದೊಡ್ಡ ನಾಯಕನಾದರೂ ಸರಿ, ಬೂತ್ ಕಮಿಟಿಯ ಜವಾಬ್ದಾರಿ ವಹಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್

Update: 2017-09-22 07:10 GMT

ಮಂಗಳೂರು, ಸೆ. 22: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೂ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಆದರೆ ಬಹುತೇಕ ಯೋಜನೆಗಳ ಬಗ್ಗೆ ಸ್ವತ: ಫಲಾನುಭವಿಗಳಿಗೆ ತಿಳಿದಿರುವುದಿಲ್ಲ. ಹಾಗಾಗಿ ಪಕ್ಷದ ಕಾರ್ಯಕರ್ತರು ಈ ನಿಟ್ಟಿನಲ್ಲಿ ಸರಕಾರದ ಸಾಧನೆಗಳ ಬಗ್ಗೆ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಎಷ್ಟೇ ದೊಡ್ಡ ನಾಯಕರಾದರೂ ಸರಿ, ತಕ್ಷಣ ಬೂತ್ ಕಮಿಟಿಯ ಜವಾಬ್ದಾರಿ ವಹಿಸಿಕೊಂಡು ಸರಕಾರದ ಸಾಧನೆಯನ್ನು ಮನೆ ಮನೆಗೆ ತೆರಳಿ ಮಾಹಿತಿ ನೀಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್  ಸೂಚನೆ ನೀಡಿದ್ದಾರೆ.

ಶುಕ್ರವಾರ ಬೆಳಗ್ಗೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಆಂತರಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರಕಾರ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಕೂಡ ಅದರ ಮಾಹಿತಿ ಅನೇಕರಿಗೆ ತಿಳಿದಿಲ್ಲ. ಸೆ.23ರಿಂದಲೇ ಪಕ್ಷದ ಎಲ್ಲ ಸ್ತರದ ನಾಯಕರು ಮನೆ ಮನೆಗೆ ತೆರಳಬೇಕಾಗಿದೆ. ಮುಖ್ಯವಾಗಿ ಹಿರಿಯ ನಾಯಕರು ಕೂಡ ಒಂದೊಂದು ಬೂತ್ ಕಮಿಟಿಯ ಜವಾಬ್ದಾರಿ ವಹಿಸಿಕೊಳ್ಳಬೇಕು. ಅಲ್ಲಿನ ಪ್ರತಿಯೊಂದು ಮನೆಗೂ ತೆರಳಿ ಪಕ್ಷ ಸಂಘಟಿಸುವ ಕೆಲಸ ಮಾಡಬೇಕಿದೆ ಎಂದರು.

ಎಐಸಿಸಿ ಕಾರ್ಯದರ್ಶಿ ಹಾಗೂ ಪಕ್ಷದ ಜಿಲ್ಲಾ ಉಸ್ತುವಾರಿ ವಿಷ್ಣುನಾಥನ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಯು.ಬಿ. ವೆಂಕಟೇಶ್, ಮಾಜಿ ಶಾಸಕ ಕೆ.ಎಂ. ಇಬ್ರಾಹೀಂ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಶಾಸಕರಾದ ಬಿ.ಎ.ಮೊಯ್ದಿನ್ ಬಾವಾ, ಜೆ.ಆರ್.ಲೋಬೊ, ಐವನ್ ಡಿಸೋಜ, ಮೇಯರ್ ಕವಿತಾ ಸನಿಲ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News