ಗುಮ್ನಾಮಿ ಬಾಬಾ ಹೆಸರಲ್ಲಿ ಬೋಸ್ ಬದುಕಿದ್ದರೆಂದು ಜನರ ನಂಬಿಕೆ: ವರದಿಯಲ್ಲಿ ಉಲ್ಲೇಖ

Update: 2017-09-22 14:49 GMT

 ಲಕ್ನೊ, ಸೆ.22: ಫೈಜಾಬಾದ್‌ನಲ್ಲಿ ಸನ್ಯಾಸಿಯಂತೆ ಬದುಕಿದ್ದ ಗುಮ್ನಾನಿ ಬಾಬಾ ಅವರೇ ಸುಭಾಶ್ಚಂದ್ರ ಬೋಸ್ ಆಗಿದ್ದರು ಎಂದು ಬಹಳಷ್ಟು ಮಂದಿ ಅಭಿಪ್ರಾಯ ಪಟ್ಟಿರುವುದಾಗಿ ನಿವೃತ್ತ ನ್ಯಾಯಾಧೀಶ ವಿಷ್ಣು ಸಹಾಯ್ ತನ್ನ ವರದಿಯಲ್ಲಿ ತಿಳಿಸಿದ್ದಾರೆ.

 ಗುಮ್ನಾನಿ ಬಾಬಾ ಬಗ್ಗೆ ಸತ್ಯಾಂಶ ತಿಳಿದುಕೊಳ್ಳಲು ಉತ್ತರಪ್ರದೇಶ ಸರಕಾರ ವಿಷ್ಣು ಸಹಾಯ್ ನೇತೃತ್ವದ ಸಮಿತಿಯೊಂದನ್ನು ರಚಿಸಿತ್ತು. ಹಲವಾರು ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು ಬಹುತೇಕ ಮಂದಿ, ಗುಮ್ನಾನಿ ಬಾಬಾ ಮತ್ತು ಸುಭಾಶ್ಚಂದ್ರ ಬೋಸ್ ಒಬ್ಬರೇ ವ್ಯಕ್ತಿಯಾಗಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಸಹಾಯ್ ಉ.ಪ್ರದೇಶದ ರಾಜ್ಯಪಾಲ ರಾಮ್‌ನಾಕ್‌ಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.

   ಸನ್ಯಾಸಿಯಂತೆ ಬದುಕಿದ್ದ ಗುಮ್ನಾನಿ ಬಾಬಾ ಅವರೇ ಸುಭಾಶ್ಚಂದ್ರ ಬೋಸ್ ಆಗಿದ್ದು, ಈ ಕುರಿತ ಸಂಶಯ ದೂರಗೊಳಿಸಬೇಕು ಎಂದು ಕಳೆದ ಜೂನ್‌ನಲ್ಲಿ ಅರ್ಜಿದಾರರೊಬ್ಬರು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಒತ್ತಾಯಿಸಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಲಹಾಬಾದ್ ಹೈಕೋರ್ಟ್ ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಆಗ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷ ನ್ಯಾಯಮೂರ್ತಿ ಸಹಾಯ್ ಆಯೋಗವನ್ನು ನೇಮಿಸಿತ್ತು.

   ಮೂಲಸಾಕ್ಷವಾಗಿ ಸಾಕ್ಷಿಗಳ ಹೇಳಿಕೆಯನ್ನು ಆಯೋಗ ದಾಖಲಿಸಿಕೊಂಡಿದ್ದು ಸಾಕ್ಷಿಗಳು ಖುದ್ದು ಹಾಜರಾಗಿ ಅಥವಾ ಅಫಿದಾವಿತ್ ಮೂಲಕ ಹೇಳಿಕೆ ನೀಡಿದ್ದಾರೆ. ಇವರಲ್ಲಿ ಬಹುತೇಕರು ಗುಮ್ನಾನಿ ಬಾಬಾ ಹಾಗೂ ಸುಭಾಶ್ಚಂದ್ರ ಬೋಸ್ ಒಬ್ಬರೇ ವ್ಯಕ್ತಿ ಎಂದು ಹೇಳಿದ್ದಾರೆ. ಕೆಲವರಷ್ಟೇ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ ಎಂದು ಸಹಾಯ್ ತಿಳಿಸಿದ್ದಾರೆ.

 ಆದರೆ ಇಲ್ಲಿ ಸಮಯದ ಅಂತರ ಬಹುದೊಡ್ಡ ಸವಾಲಾಗಿದೆ . ಗುಮ್ನಾನಿ ಬಾಬಾ 1985ರಲ್ಲಿ ಮೃತಪಟ್ಟಿದ್ದಾರೆ. ಸಾಕ್ಷಿಗಳು 2016 ಮತ್ತು 2017ರಲ್ಲಿ ಹೇಳಿಕೆ ನೀಡಿದ್ದು ಇಲ್ಲಿ ಸುಮಾರು 3 ದಶಕಗಳ ಸಮಯದ ಅಂತರವಿದೆ. ಸಮಯ ಕಳೆದಂತೆ ಸ್ಮರಣ ಶಕ್ತಿ ಕುಂದುವುದು ಹಾಗೂ ಕೆಲವೊಮ್ಮೆ ಘಟನೆ ಮತ್ತು ವಿಷಯಗಳನ್ನು ಊಹಿಸಿ ಹೇಳಿಕೆ ನೀಡುವುದು ಸಹಜ ವಿಷಯವಾಗಿದೆ ಎಂದು ಸಹಾಯ್ ಹೇಳಿದ್ದಾರೆ.

ಅಲ್ಲದೆ ಬಹುತೇಕ ಸಾಕ್ಷಿಗಳು ಗುಮ್ನಾನಿ ಬಾಬಾ ಅವರೇ ಬೋಸ್ ಆಗಿದ್ದಾರೆ ಎಂಬ ಪೂರ್ವಸಿದ್ಧಾಂತ ಹೊಂದಿದ್ದು , ತಮ್ಮ ಸಿದ್ದಾಂತವನ್ನು ಆಯೋಗ ಒಪ್ಪದಿದ್ದರೆ ಮಾತ್ರ ಗುಮ್ನಾನಿ ಬಾಬಾರ ಗುರುತು ಪತ್ತೆಗೆ ಆಯೋಗ ಪ್ರಯತ್ನಿಸಲಿ ಎಂಬುದು ಸಾಕ್ಷಿಗಳ ಭಾವನೆಯಾಗಿತ್ತು ಎಂದು ಸಹಾಯ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News