“ದುರ್ಗೆ ರಕ್ಷಣಾ ಸಚಿವೆ, ಲಕ್ಷ್ಮಿ ವಿತ್ತ ಸಚಿವೆ”: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವ್ಯಾಖ್ಯಾನ

Update: 2017-09-22 15:01 GMT

ಹೊಸದಿಲ್ಲಿ, ಸೆ.22: ಪುರಾತನ ಭಾರತದಲ್ಲಿ ದುರ್ಗಾದೇವಿ ರಕ್ಷಣಾ ಸಚಿವೆಯಾಗಿದ್ದರೆ, ಲಕ್ಷ್ಮಿ ವಿತ್ತ ಸಚಿವೆಯಾಗಿದ್ದಳು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವ್ಯಾಖ್ಯಾನಿಸಿದ್ದಾರೆ.

  ಮೊಹಾಲಿಯ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ (ಐಎಸ್‌ಬಿ)ಯಲ್ಲಿ ಆಯೋಜಿಸಲಾದ ನಾಯಕತ್ವ ವಿಚಾರಸಂಕಿರಣದಲ್ಲಿ ಮಾತನಾಡಿದ ನಾಯ್ಡು, ಮಹಿಳಾ ಸಬಲೀಕರಣದ ವಿಷಯದ ಕುರಿತು ವಿವರಿಸುವಾಗ ದುರ್ಗೆ ಮತ್ತು ಲಕ್ಷ್ಮೀದೇವಿಯ ಪ್ರಸ್ತಾಪ ಮಾಡಿದರು. ವಿದ್ಯಾರ್ಥಿಗಳಲ್ಲಿ ಪರಂಪರೆಯ ಬಗ್ಗೆ ಹೆಮ್ಮೆಯಿರಬೇಕು ಎಂದ ನಾಯ್ಡು, ನಿಮ್ಮ ಭಾಷೆ ಎದುರಲ್ಲಿರುವ ವ್ಯಕ್ತಿಗೆ ಅರ್ಥವಾಗುತ್ತಿಲ್ಲ ಎಂದಾಗ ಮಾತ್ರ ಇತರ ಭಾಷೆ ಬಳಸಬೇಕು. ಇಲ್ಲದಿದ್ದರೆ ನಿಮ್ಮ ಮಾತೃಭಾಷೆಯಲ್ಲೇ ವ್ಯವಹರಿಸಬೇಕು ಎಂದು ಕಿವಿಮಾತು ನುಡಿದರು.

 ಮಾದರಿ ರಾಜ್ಯಾಡಳಿತದ ಕಾರಣ ರಾಮರಾಜ್ಯ ಎಂಬುದು ನಮ್ಮ ಇತಿಹಾಸದ ಅತ್ಯಂತ ಶ್ರೇಷ್ಠ ಅವಧಿ ಎಂದು ಇಂದಿಗೂ ಮಾನ್ಯವಾಗಿದೆ. ಆದರೆ ಇಂದಿನ ಸಂದರ್ಭದಲ್ಲಿ ಯಾರಾದರೂ ಈ ಬಗ್ಗೆ ಮಾತನಾಡಿದರೆ ಅದನ್ನು ಕೋಮುಭಾವನೆಯ ದೃಷ್ಟಿಕೋನದಲ್ಲಿ ವ್ಯಾಖ್ಯಾನಿಸಲಾಗುತ್ತದೆ ಎಂದು ಅವರು ಹೇಳಿದರು. “ನಾನು ದೇಶದ ಉಪರಾಷ್ಟ್ರಪತಿಯಾಗಿರುವ ಕಾರಣ ಹೃದಯಾಂತರಾಳದ ಮಾತನ್ನು ಸಾರ್ವಜನಿಕವಾಗಿ ಆಡಬಾರದು ಎಂದು ನನಗೆ ಹತ್ತಿರವಿರುವ ಕೆಲವರು ನನಗೆ ಜ್ಞಾಪಿಸಿದ್ದಾರೆ. ಆದರೆ ನಾನು ಹೃದಯಾಂತರಾಳದ ಮಾತನ್ನು ಹೊರಹಾಕದಿದ್ದರೆ ಅದು ಬೆಳೆದು ನನ್ನ ಆರೋಗ್ಯಕ್ಕೇ ಕುತ್ತು ತರುತ್ತದೆ” ಎಂದು ವಿನೋದವಾಗಿ ನುಡಿದರು.

ಹೆಚ್ಚುತ್ತಿರುವ ಅಸಹಿಷ್ಣುತೆ ಹಾಗೂ ವಾಕ್‌ಸ್ವಾತಂತ್ರದ ಕುರಿತು ಇದೀಗ ಕೆಲ ದಿನಗಳಿಂದ ಬಹಳಷ್ಟು ಚರ್ಚೆ ನಡೆಯುತ್ತಿದೆ. ಆದರೆ ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಹೇಳುವುದು ತಪ್ಪಾಗುತ್ತದೆ. ಅಫ್ಜಲ್ ಗುರುವಿನ ಬಗ್ಗೆಯೂ ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಹಕ್ಕಿದೆ. ಆದರೆ ವಾಕ್‌ಸ್ವಾತಂತ್ರ ಸಂವಿಧಾನದ ಚೌಕಟ್ಟಿನಲ್ಲಿರಬೇಕು. ವಾಕ್‌ಸ್ವಾತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಕೆಲವೊಂದು ಪರಿಮಿತಿಗಳಿವೆ ಎಂದು ನಾಯ್ಡು ಹೇಳಿದರು.

     ಪ್ರಜಾಪ್ರಭುತ್ವಕ್ಕೆ ನಿಬಂಧನೆಯ ಅಗತ್ಯವಿದೆ. ವ್ಯಕ್ತಿಯ ಘನತೆಗೆ ಮಹತ್ವವಿದೆ, ಆದರೆ ಅದು ದೇಶದ ಸಮಗ್ರತೆಗಿಂತ ಮಿಗಿಲಲ್ಲ ಎಂದು ಹೇಳಿದ ಅವರು, ಭಾರತೀಯ ಸಮಾಜದಲ್ಲಿ ಇತರರ ಅಭಿಪ್ರಾಯಗಳನ್ನು ಆಲಿಸುವ ಸಹನೆಯ ವಾತಾವರಣವಿದೆ. ವೈವಿಧ್ಯತೆ ಈ ದೇಶದ ವೈಶಿಷ್ಟ್ಯವಾಗಿದೆ. ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಪಾಲಿಸುವ ಸ್ವಾತಂತ್ರ್ಯವಿದೆ. ಧರ್ಮ, ಜಾತಿಯನ್ನು ಪರಿಗಣಿಸದೆ ಸರ್ವರನ್ನೂ ಸಮಾನರಾಗಿ ಕಾಣಲಾಗುತ್ತಿದೆ. ಜಾತ್ಯಾತೀತತೆ ಎಂಬುದು ಭಾರತದಲ್ಲಿ ಬಲಿಷ್ಠವಾಗಿದ್ದು ಇದಕ್ಕೆ ಸಂವಿಧಾನ ಕಾರಣವಲ್ಲ, ಜಾತ್ಯಾತೀತತೆಯ ಭಾವನೆ ಭಾರತೀಯರ ಡಿಎನ್‌ಎಯಲ್ಲೇ ಇರುವುದು ಕಾರಣವಾಗಿದೆ . ಆದ್ದರಿಂದ ಅಸಹಿಷ್ಣುತೆ ಹೆಚ್ಚುತ್ತಿರುವ ಸಮಾಜವೆಂಬ ಹಣೆಪಟ್ಟಿ ಅಂಟಿಸಬಾರದು ಎಂದು ನಾಯ್ಡು ಹೇಳಿದರು.

 ತಾನು ರಾಜಕೀಯದಿಂದ ನಿವೃತ್ತನಾಗಿದ್ದೇನೆ, ಆದರೆ ದಣಿದಿಲ್ಲ ಎಂದು ಹೇಳಿದ ಅವರು, ಎನ್‌ಡಿಎ ಸರಕಾರದ ಸಾಧನೆಯನ್ನು ತನ್ನ ಭಾಷಣದ ವೇಳೆ ಪಟ್ಟಿ ಮಾಡಿದರು. ಕೇಂದ್ರ ನಾಗರಿಕ ವಿಮಾನಯಾನ ಸಹಾಯಕ ಸಚಿವ ಜಯಂತ್ ಸಿನ್ಹ, ಹೀರೋ ಕಾರ್ಪೊರೇಟ್ ಸಂಸ್ಥೆಯ ಅಧ್ಯಕ್ಷ ಸುನಿಲ್ ಕಾಂತ್ ಮಂಜಲ್ ಹಾಗೂ ಪಂಜಾಬ್‌ನ ಆರೋಗ್ಯ ಸಚಿವ ಬ್ರಹ್ಮ ಮೊಹಿಂದ್ರ (ಪಂಜಾಬ್ ಮುಖ್ಯಮಂತ್ರಿಯ ಪ್ರತಿನಿಧಿಯಾಗಿ ಭಾಗವಹಿಸಿದ್ದರು) ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News