ವಿದೇಶಿ ಬ್ಯಾಂಕ್ ಖಾತೆ ಮುಚ್ಚದಿರಲು ಕಾರ್ತಿ ಚಿದಂಬರಂಗೆ ಲುಕೌಟ್ ನೊಟೀಸ್: ಸಿಬಿಐ

Update: 2017-09-22 16:20 GMT

ಹೊಸದಿಲ್ಲಿ, ಸೆ. 22: ವಿದೇಶಕ್ಕೆ ತೆರಳಿ ಹಲವು ವಿದೇಶಿ ಬ್ಯಾಂಕ್ ಖಾತೆಗಳನ್ನು ಮುಚ್ಚುವ ಸಾಧ್ಯತೆ ಇರುವುದರಿಂದ ಕಾರ್ತಿ ಚಿದಂಬರಂ ವಿರುದ್ಧ ಲುಕೌಟ್ ನೋಟಿಸ್ ಜಾರಿಗೊಳಿಸಿದ್ದೇವೆ ಎಂದು ಸಿಬಿಐ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕಾರ್ತಿ ಚಿದಂಬರಂ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಸಿಬಿಐ, ತನಿಖೆಯ ಸಂದರ್ಭ ಹಲವು ವಿಷಯಗಳು ಬೆಳಕಿಗೆ ಬರಲಿವೆ ಎಂದಿದೆ.

ತನ್ನ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠದ ಮುಂದೆ ಸಲ್ಲಿಸಲು ಸಿಬಿಐ ಬಯಸಿತು. ಆದರೆ, ಇದಕ್ಕೆ ಕಾರ್ತಿ ಚಿದಂಬರಂ ಅವರ ಪರ ವಕೀಲ ಕಪಿಲ್ ಸಿಬಲ್ ವಿರೋಧ ವ್ಯಕ್ತಪಡಿಸಿದರು.

ವಿದೇಶದಲ್ಲಿ ಅವರು ಏನು ಮಾಡಿದ್ದಾರೋ ಅದರ ಒಂದು ಭಾಗ ಈ ಮುಚ್ಚಿದ ಲಕೋಟೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮಹ್ತಾ ಅವರು ಎ.ಎಂ. ಕಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರ ಚೂಡ ಅವರು ಕೂಡ ಇದ್ದ ಪೀಠಕ್ಕೆ ತಿಳಿಸಿದರು.

ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯದ ಮುಂದೆ ಸಲ್ಲಿಸಲು ಸಿಬಿಐ ಅವಕಾಶ ನೀಡಬೇಕು ಎಂಬ ಮೆಹ್ತಾ ಅವರ ಪ್ರತಿಪಾದನೆಗೆ ಸಿಬಲ್ ಮತ್ತೊಮ್ಮೆ ವಿರೋಧ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News