ದಕ್ಷಿಣ ಏಶ್ಯದಲ್ಲಿ ಉಗ್ರ ಗುಂಪುಗಳಿಗೆ ಆಶ್ರಯ

Update: 2017-09-22 16:44 GMT

ವಾಶಿಂಗ್ಟನ್, ಸೆ. 22: ದಕ್ಷಿಣ ಏಶ್ಯದಲ್ಲಿ ಹಾಗೂ ಭಯೋತ್ಪಾದನೆಯನ್ನು ಸರಕಾರಿ ನೀತಿಯನ್ನಾಗಿ ಮಾಡಿಕೊಂಡಿರುವ ದೇಶಗಳಲ್ಲಿ ಭಯೋತ್ಪಾದಕ ಗುಂಪುಗಳಿಗೆ ನಿರಂತರವಾಗಿ ಆಶ್ರಯ ಮತ್ತು ಬೆಂಬಲ ಸಿಗುತ್ತಿದೆ ಎಂದು ಭಾರತ ಗುರುವಾರ ತನ್ನ ‘ಬ್ರಿಕ್ಸ್’ ಭಾಗೀದಾರ ದೇಶಗಳಿಗೆ ಹೇಳಿದೆ.

ಭಾರತ ಇಲ್ಲಿ ಪರೋಕ್ಷವಾಗಿ ಪಾಕಿಸ್ತಾನವನ್ನು ಕುಟುಕಿರುವುದು ಸ್ಪಷ್ಟವಾಗಿದೆ. ಅದೇ ವೇಳೆ, ಪಾಕಿಸ್ತಾನದ ಆಪ್ತ ಮಿತ್ರ ದೇಶ ಚೀನಾ ‘ಬ್ರಿಕ್ಸ್’ (ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ ದೇಶಗಳನ್ನೊಳಗೊಂಡ ಗುಂಪು) ಸದಸ್ಯ ದೇಶವಾಗಿದೆ.

‘‘ಭಯೋತ್ಪಾದನೆಯ ಭಯಾನಕತೆಯು ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ನಿರಂತರವಾಗಿ ಕಾಡುತ್ತಿದೆ’’ ಎಂದು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ‘ಬ್ರಿಕ್ಸ್’ ಸಭೆಯಲ್ಲಿ ಹೇಳಿದರು. ಸಭೆಯು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಮಹಾಧಿವೇಶನದ ನೇಪಥ್ಯದಲ್ಲಿ ಜರಗಿತು.

ಪಾಕಿಸ್ತಾನದಲ್ಲಿ ನೆಲೆಸಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ಜಾಗತಿಕ ಭಯೋತ್ಪಾದಕ ಎಂಬುದಾಗಿ ಘೋಷಿಸುವ ವಿಶ್ವಸಂಸ್ಥೆಯ ಪ್ರಯತ್ನಗಳಿಗೆ ಚೀನಾ ನಿರಂತರವಾಗಿ ಅಡ್ಡಗಾಲಿಡುತ್ತಾ ಬಂದಿರುವುದನ್ನು ಸ್ಮರಿಸಬಹುದಾಗಿದೆ.

‘‘ಭಯೋತ್ಪಾದಕ ಜಾಲಗಳು, ಅವುಗಳ ಆರ್ಥಿಕ ಮೂಲಗಳು ಮತ್ತು ಚಲನವಲನಗಳನ್ನು ಭಗ್ನಗೊಳಿಸಲು ಸಂಘಟಿತ ಪ್ರಯತ್ನಗಳ ಅಗತ್ಯವಿದೆ’’ ಎಂದು ಸುಶ್ಮಾ ಹೇಳಿದರು ಎಂದು ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

‘‘ಭಯೋತ್ಪಾದಕರಿಗೆ ಲಭಿಸುತ್ತಿರುವ ಹಣಕಾಸು ನೆರವು, ಅವರ ಶಸ್ತ್ರಾಸ್ತ್ರ ಸರಬರಾಜು ಮತ್ತು ರಾಜಕೀಯ ಬೆಂಬಲವನ್ನು ವ್ಯವಸ್ಥಿತವಾಗಿ ಕಡಿದುಹಾಕಬೇಕಾಗಿದೆ’’ ಎಂದು ಸುಶ್ಮಾ ನುಡಿದರು.

ಭಯೋತ್ಪಾದನೆ ಖಂಡಿಸಿದ ‘ಬ್ರಿಕ್ಸ್’: ವಿಶ್ವಸಂಸ್ಥೆಯ ಸಮಗ್ರ ಸುಧಾರಣೆಗೆ ಒತ್ತಾಯ

‘ಬ್ರಿಕ್ಸ್’ ದೇಶಗಳು ಎಲ್ಲ ರೀತಿಯ ಭಯೋತ್ಪಾದನೆಯನ್ನು ಖಂಡಿಸಿವೆ ಹಾಗೂ ಭಾರತ ಸೇರಿದಂತೆ ಐದು ದೇಶಗಳ ಸಂಘಟನೆಗೆ ವಿಶ್ವಸಂಸ್ಥೆಯಲ್ಲಿ ಹೆಚ್ಚಿನ ಪಾತ್ರ ವಹಿಸಲು ಸಾಧ್ಯವಾಗುವಂತೆ ವಿಶ್ವಸಂಸ್ಥೆಗೆ ಸಮಗ್ರ ಸುಧಾರಣೆ ತರಬೇಕು ಎಂದು ಒತ್ತಾಯಿಸಿವೆ.

ಭದ್ರತಾ ಮಂಡಳಿ ಸೇರಿದಂತೆ ವಿಶ್ವಸಂಸ್ಥೆಯಲ್ಲಿ ಸಮಗ್ರ ಸುಧಾರಣೆಗಳನ್ನು ತರುವ ಅಗತ್ಯವನ್ನು ಪ್ರತಿಪಾದಿಸಿ ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಗಳನ್ನು ಒಳಗೊಂಡ ‘ಬ್ರಿಕ್ಸ್’ ದೇಶಗಳ ವಿದೇಶ ಸಚಿವರು ಸಂಯುಕ್ತ ಹೇಳಿಕೆಯೊಂದನ್ನು ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News