ಕಿಮ್ ಜಾಂಗ್ ‘ಹುಚ್ಚ’: ಟ್ವಿಟರ್‌ನಲ್ಲಿ ನಿಂದಿಸಿದ ಟ್ರಂಪ್

Update: 2017-09-22 16:59 GMT

ನ್ಯೂಯಾರ್ಕ್: ಉತ್ತರಕೊರಿಯದ ನಾಯಕ ಕಿಮ್ ಜಾಂಗ್ ಉನ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಮತ್ತೆ ಕಿಡಿಕಾರಿದ್ದು, ಆತನೊಬ್ಬ ‘ಹುಚ್ಚ’ನೆಂದು ನಿಂದಿಸಿದ್ದಾರೆ. ತನ್ನದೇ ಜನರನ್ನು ಉಪವಾಸದಲ್ಲಿ ಕೆಡವಲು ಅಥವಾ ಕೊಲ್ಲಲೂ ಆತ ಹಿಂಜರಿಯುವುದಿಲ್ಲ. ಹಿಂದೆಂದೂ ಇಲ್ಲದ ರೀತಿಯಲ್ಲಿ ನಾವು ಆತನನ್ನು ಕಾಡುತ್ತೇವೆ ಎಂದವರು ಎಚ್ಚರಿಕೆ ನೀಡಿದ್ದಾರೆ.

  ಅಮೆರಿಕವು ಉತ್ತರ ಕೊರಿಯವನ್ನು ಸಂಪೂರ್ಣವಾಗಿ ನಾಶಪಡಿಸಬಲ್ಲದು ಎಂದು ತಾನು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮಾಡಿದ ಭಾಷಣಕ್ಕೆ ಕಿಮ್ ಜಾಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ಟ್ರಂಪ್ ಟ್ವಿಟರ್‌ನಲ್ಲಿ ಈ ಎಚ್ಚರಿಕೆ ನೀಡಿದ್ದಾರೆ.

     ಉತ್ತರ ಕೊರಿಯದ ವಿರುದ್ಧ ಅಮೆರಿಕವು ಹೊಸ ನಿರ್ಬಂಧಗಳನ್ನು ಹೇರುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಪೆಸಿಫಿಕ್ ಸಾಗರದಲ್ಲಿ ಹೈಡ್ರೋಜನ್ ಬಾಂಬ್ ಅನ್ನು ಪರೀಕ್ಷಿಸುವ ಬಗ್ಗೆ ಉತ್ತರ ಕೊರಿಯ ಪರಿಶೀಲಿಸುತ್ತಿರುವುದಾಗಿ ಅದರ ವಿದೇಶಾಂಗ ಸಚಿವ ರಿ ಯೊಂಗ್ ಹ್ಯೊ ತಿಳಿಸಿದ್ದರು.

    ಅಮೆರಿಕವು ಉತ್ತರ ಕೊರಿಯವನ್ನು ಸಂಪೂರ್ಣ ನಾಶಪಡಿಸುವುದೆಂಬ ಟೀಕೆಗೆ ಪ್ರತಿಕ್ರಿಯಿಸಿದ್ದ ಕಿಮ್ ಜಾಂಗ್ ಉನ್ ಅವರು ಟ್ರಂಪ್ ಓರ್ವ ವಿಕ್ಷಿಪ್ತ ಮನಸ್ಸಿನ ವ್ಯಕ್ತಿಯೆಂದು ಕಟಕಿಯಾಡಿದ್ದರು ಹಾಗೂ ಉತ್ತರ ಕೊರಿಯದ ವಿರುದ್ಧದ ಅಮೆರಿಕ ಒಡ್ಡುತ್ತಿರುವ ಬೆದರಿಕೆಗಳಿಗೆ ಅದು ದೊಡ್ಡ ಬೆಲೆಯನ್ನು ತೆರಲಿದೆ ಎಂದು ಎಚ್ಚರಿಕೆ ನೀಡಿದ್ದರು.

 ಉತ್ತರ ಕೊರಿಯದೊಂದಿಗೆ ವಾಣಿಜ್ಯ ಸಹಕಾರ ಹೊಂದಿರುವ ಕಂಪೆನಿಗಳು ಹಾಗೂ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರಕಾರದ ಅಧಿಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಟ್ರಂಪ್ ಆಡಳಿತವು ಗುರುವಾರ ವಿಶೇಷ ಆದೇಶವನ್ನು ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News