ಕಾಶ್ಮೀರ ವಿವಾದವನ್ನು ಭಾರತ, ಪಾಕ್ ದ್ವಿಪಕ್ಷೀಯವಾಗಿ ನಿಭಾಯಿಸಲಿ: ಚೀನಾ

Update: 2017-09-22 17:05 GMT

ಬೀಜಿಂಗ್, ಸೆ. 22: ಕಾಶ್ಮೀರ ವಿವಾದವನ್ನು ಭಾರತ ಮತ್ತು ಪಾಕಿಸ್ತಾನಗಳು ದ್ವಿಪಕ್ಷೀಯವಾಗಿ ನಿಭಾಯಿಸಬೇಕು ಎಂದು ಚೀನಾ ಶುಕ್ರವಾರ ಹೇಳಿದೆ. ಈ ಮೂಲಕ, ವಿಶ್ವಸಂಸ್ಥೆಯು ಕಾಶ್ಮೀರಕ್ಕಾಗಿ ವಿಶೇಷ ಪ್ರತಿನಿಧಿಯೊಬ್ಬರನ್ನು ನೇಮಿಸಬೇಕು ಎಂಬ ಪಾಕಿಸ್ತಾನದ ಬೇಡಿಕೆಯನ್ನು ತಳ್ಳಿಹಾಕಿದೆ.

 ಕಾಶ್ಮೀರಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ನಿರ್ಣಯಗಳನ್ನು ಜಾರಿಗೊಳಿಸಬೇಕು ಎಂಬುದಾಗಿ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಚೀನಾದ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ಲು ಕಾಂಗ್, ವಿವಾದವು ಇತಿಹಾಸದ ಬಳುವಳಿಯಾಗಿದೆ ಹಾಗೂ ಈ ವಿವಾದವನ್ನು ಬಗೆಹರಿಸಲು ಹೊಸದಿಲ್ಲಿ ಮತ್ತು ಇಸ್ಲಾಮಾಬಾದ್‌ಗಳು ತಮ್ಮ ನಡುವಿನ ಸಂವಹನಗಳನ್ನು ಹೆಚ್ಚಿಸಬೇಕು ಎಂದು ಹೇಳಿದರು.

‘‘ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಚೀನಾದ ನಿಲುವು ಸ್ಪಷ್ಟವಾಗಿದೆ. ಕಾಶ್ಮೀರ ವಿವಾದವು ಇತಿಹಾಸದಿಂದ ಬಂದಿರುವುದು. ಭಾರತ ಮತ್ತು ಪಾಕಿಸ್ತಾನಗಳು ತಮ್ಮ ನಡುವಿನ ಮಾತುಕತೆ ಮತ್ತು ಸಂಪರ್ಕಗಳನ್ನು ಹೆಚ್ಚಿಸಿ ಜ್ವಲಂತ ವಿಷಯಗಳನ್ನು ಸರಿಯಾಗಿ ನಿಭಾಯಿಸಬೇಕು ಹಾಗೂ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಜಂಟಿಯಾಗಿ ಕಾಪಾಡಿಕೊಳ್ಳಬೇಕು’’ ಎಂದು ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಲು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News