ಪಾಕ್ ಭಯೋತ್ಪಾದಕ ಚಟುವಟಿಕೆಗಳ ಕೇಂದ್ರ: ಅಫ್ಘಾನ್

Update: 2017-09-22 17:19 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಸೆ. 22: ತನ್ನ ನೆಲದಲ್ಲಿ ಸಕ್ರಿಯವಾಗಿರುವ ವಿವಿಧ ಭಯೋತ್ಪಾದಕ ಗುಂಪುಗಳು ಮತ್ತು ಅವುಗಳ ಆಶ್ರಯದಾತರ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾಗಿರುವ ಪಾಕಿಸ್ತಾನ, ತನ್ನ ತಪ್ಪುಗಳನ್ನು ಮುಚ್ಚಿಹಾಕಲು ಅಂತಾರಾಷ್ಟ್ರೀಯ ಸಮುದಾಯದ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ ಎಂದು ಅಫ್ಘಾನಿಸ್ತಾನ ಗುರುವಾರ ಆರೋಪಿಸಿದೆ.

ಪಾಕಿಸ್ತಾನದಲ್ಲಿ ತಾಲಿಬಾನ್‌ಗೆ ಸುರಕ್ಷಿತ ಆಶ್ರಯತಾಣಗಳಿಲ್ಲ, ಅವುಗಳು ಅಫ್ಘಾನಿಸ್ತಾನದಲ್ಲೇ ಇವೆ ಎಂಬುದಾಗಿ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಉತ್ತರಿಸುವ ತನ್ನ ಹಕ್ಕನ್ನು ಚಲಾಯಿಸಿದ ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ನೆಲೆ ಸಿಕ್ಕಿರುವುದು ಆ ದೇಶದಲ್ಲಿ ಮತ್ತು ವಲಯದಲ್ಲಿ ಉಂಟಾಗಿರುವ ಅಭದ್ರತೆಯ ಪ್ರಧಾನ ಮೂಲ ಎನ್ನುವುದು ಸ್ಪಷ್ಟ ಎಂದು ಹೇಳಿದೆ.

ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ಸುರಕ್ಷಿತ ಆಶ್ರಯ ತಾಣಗಳಿವೆ ಎಂಬುದಾಗಿ ಸದಸ್ಯ ದೇಶವೊಂದು ಹೇಳಿಕೊಂಡಿರುವುದು ಸರಿಯಲ್ಲ ಎಂದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಅಫ್ಘಾನ್ ಪ್ರತಿನಿಧಿ ಹೇಳಿದರು.

1971ರಲ್ಲಿ ಪಾಕ್ ಸೇನೆಯಿಂದ ಜನಾಂಗೀಯ ಹತ್ಯೆ: ಶೇಖ್ ಹಸೀನಾ

ಪಾಕಿಸ್ತಾನದ ಸೇನೆ 1971ರಲ್ಲಿ ‘ಪೈಶಾಚಿಕ’ ಸೇನಾ ಕಾರ್ಯಾಚರಣೆ ನಡೆಸಿ 30 ಲಕ್ಷ ಅಮಾಯಕ ಜನರ ‘ಜನಾಂಗೀಯ ಹತ್ಯೆ’ ಮಾಡಿದೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಹಾಧಿವೇಶನವನ್ನುದ್ದೇಶಿಸಿ ಗುರುವಾರ ಮಾತನಾಡಿದ ಹಸೀನಾ, ಅಂದಿನ ‘ಬಿಡುಗಡೆಯ ಯುದ್ಧ’ದ ಸಂದರ್ಭದಲ್ಲಿ ಹತರಾದ ಜನರಿಗೆ ಶ್ರದ್ಧಾಂಜಲಿ ಸಲ್ಲಿಸುವುದಕ್ಕಾಗಿ ತನ್ನ ದೇಶದ ಸಂಸತ್ತು ಇತ್ತೀಚೆಗೆ ಮಾರ್ಚ್ 25ನ್ನು ‘ಜನಾಂಗೀಯ ಹತ್ಯೆ ದಿನ’ ಎಂಬುದಾಗಿ ಘೋಷಿಸಿದೆ ಎಂದರು.

1971 ಮಾರ್ಚ್ 25ರ ಮಧ್ಯರಾತ್ರಿ ಅಂದಿನ ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನಿ ಪಡೆಗಳು ಹಠಾತ್ ದಮನ ಕಾರ್ಯಾಚರಣೆ ನಡೆಸಿದ ಬಳಿಕ 1971ರ ಯುದ್ಧ ಸ್ಫೋಟಗೊಂಡಿತು ಹಾಗೂ ಯುದ್ಧವು ಡಿಸೆಂಬರ್ 16ರಂದು ಕೊನೆಗೊಂಡಿತು.

ಅದೇ ವರ್ಷ ಪಾಕಿಸ್ತಾನ ಸೋಲೊಪ್ಪಿಕೊಂಡಿತು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತೀಯ ಸೈನಿಕರನ್ನು ಒಳಗೊಂಡ ಮಿತ್ರಪಡೆಗಳಿಗೆ ಢಾಕಾದಲ್ಲಿ ನಿಶ್ಶರ್ತವಾಗಿ ಶರಣಾಯಿತು.

ಒಂಬತ್ತು ತಿಂಗಳ ಕಾಲ ನಡೆದ ಯುದ್ಧದಲ್ಲಿ ಅಧಿಕೃತವಾಗಿ 30 ಲಕ್ಷ ಜನರು ಮೃತಪಟ್ಟರು.

‘‘1971ರ ಬಿಡುಗಡೆ ಯುದ್ಧದಲ್ಲಿ ನಾವು ಅತ್ಯುಗ್ರ ಸ್ವರೂಪದ ಜನಾಂಗೀಯ ಹತ್ಯೆಯೊಂದನ್ನು ಅನುಭವಿಸಿದೆವು. ಒಂಬತ್ತು ತಿಂಗಳ ಅವಧಿಯ ಯುದ್ಧದಲ್ಲಿ 30 ಲಕ್ಷ ಅಮಾಯಕ ಜನರು ಪ್ರಾಣ ಕಳೆದುಕೊಂಡರು ಹಾಗೂ 2 ಲಕ್ಷಕ್ಕೂ ಅಧಿಕ ಮಹಿಳೆಯರ ಅತ್ಯಾಚಾರಕ್ಕೊಳಗಾದರು’’ ಎಂದು ಹಸೀನಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News