ಮೆಕ್ಸಿಕೊ ಭೂಕಂಪ: 3ನೆ ದಿನವೂ ಅವಿರತ ರಕ್ಷಣಾ ಕಾರ್ಯ

Update: 2017-09-22 17:24 GMT

ಮೆಕ್ಸಿಕೊ ಸಿಟಿ, ಸೆ. 22: ಮೆಕ್ಸಿಕೊದಲ್ಲಿ ಸಂಭವಿಸಿದ ಭೀಕರ ಭೂಕಂಪದ ಮೂರನೆ ದಿನವೂ ಅವಶೇಷಗಳೆಡೆಯಲ್ಲಿ ಬದುಕುಳಿದಿರುವವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿತು.

 ಇಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ 7.1ರ ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಲ್ಲಿ ಮೃತಪಟ್ಟಿರುವವರ ಸಂಖ್ಯೆ 272 ಎಂಬುದಾಗಿ ಅಧಿಕಾರಿಗಳು ಹೇಳಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ರಕ್ಷಣಾ ಕಾರ್ಯದಲ್ಲಿ ಮಂಗಳವಾರದಿಂದಲೂ ನಿರಂತರವಾಗಿ ತೊಡಗಿಕೊಂಡಿರುವ ರಕ್ಷಣಾ ಸಿಬ್ಬಂದಿ ವಿಶ್ರಾಂತಿ ಇಲ್ಲದೆ ಜನರನ್ನು ಬದುಕಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಟನ್‌ಗಟ್ಟಲೆ ಅವಶೇಷಗಳನ್ನು ಅವರು ತೆಗೆದಿದ್ದಾರೆ.

ಆದರೆ, ಸಮಯ ಮೀರುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಸರಾಸರಿ ಬದುಕುಳಿಯುವ ಸಮಯ, ಗಾಯಗಳನ್ನು ಅವಲಂಬಿಸಿ 72 ಗಂಟೆಗಳು ಎಂದು ಪರಿಣತರು ಹೇಳುತ್ತಾರೆ.

ಮೆಕ್ಸಿಕೊ ಸಿಟಿಯಲ್ಲಿ ಈಗಲೂ ಸುಮಾರು 200 ಮಂದಿ ನಾಪತ್ತೆಯಾಗಿದ್ದಾರೆ ಹಾಗೂ ಅವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಭಾವಿಸಲಾಗಿದೆ.

ನಗರ ಮಧ್ಯದ ರೊಮ ಉಪನಗರದಲ್ಲಿ ಕುಸಿದ ಏಳು ಮಹಡಿಗಳ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿರುವ ಜನರನ್ನು ತಲುಪಲು ರಕ್ಷಣಾ ಕಾರ್ಯಕರ್ತರು ಅವಿರತ ಹೋರಾಟ ನಡೆಸಿದ್ದಾರೆ. ಅವರು ಈಗಾಗಲೇ 28 ಮಂದಿಯನ್ನು ಅವಶೇಷಗಳ ರಾಶಿಯಿಂದ ಹೊರಗೆ ಎಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News