×
Ad

ಎಎಪಿ ಮಾಜಿ ನಾಯಕಿ ಅಂಜಲಿ ದಮಾನಿಯಾಗೆ ಬೆದರಿಕೆ ಕರೆ

Update: 2017-09-23 16:36 IST

ಹೊಸದಿಲ್ಲಿ,ಸೆ.23 :  ಪಾಕಿಸ್ತಾನದ ಸ್ಥಿರ ದೂರವಾಣಿ ಸಂಖ್ಯೆಯೊಂದರಿಂದ  ತನಗೆ  ಬೆದರಿಕೆ ಕರೆಯೊಂದು ಬಂದಿದೆಯೆಂದು ಸಾಮಾಜಿಕ ಕಾರ್ಯಕರ್ತೆ ಹಾಗೂ ಮಾಜಿ ಎಎಪಿ ನಾಯಕಿ ಅಂಜಲಿ ದಮಾನಿಯಾ  ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅಂಜಲಿ, ಮಧ್ಯ ರಾತ್ರಿ 12.33ರ ಸುಮಾರಿಗೆ  ತನಗೆ ಕರೆ ಬಂದಿದ್ದು ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿ  ಮಾಜಿ ಮಹಾರಾಷ್ಟ್ರ ಹಣಕಾಸು ಸಚಿವ ಹಾಗೂ ಬಿಜೆಪಿ ಶಾಸಕ ಏಕನಾಥ್ ಖಡ್ಸೆ ವಿರುದ್ಧದ ಎಲ್ಲಾ ಕೇಸುಗಳನ್ನು ಹಿಂದಕ್ಕೆ ಪಡೆಯುವಂತೆ  ಹೇಳಿ ಬೆದರಿಸಿದ್ದ ಎಂದಿದ್ದಾರೆ.

ಕರೆ ಮಾಡಿದ ವ್ಯಕ್ತಿಯ ಸಂಖ್ಯೆಯನ್ನು ಟ್ರೂಕಾಲರ್ ನಲ್ಲಿ ಹಾಕಿದಾಗ ಅಲ್ಲಿ `ದಾವೂದ್ 2' ಎಂದು ಬಂದಿರುವುದರ ಸ್ಕ್ರೀನ್ ಶಾಟ್ ಅನ್ನೂ ಅವರು ಶೇರ್ ಮಾಡಿದ್ದಾರೆ. ಈ ಬಗ್ಗೆ ಆಕೆ ಈಗಾಗಲೇ  ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜಂಟಿ ಪೊಲೀಸ್ ಆಯುಕ್ತರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ  ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುವಾಗ ಅಂಜಲಿ ವಿರುದ್ಧ ಅಶ್ಲೀಲವಾಗಿ ಮಾತನಾಡಿದ ಆರೋಪದ ಮೇಲೆ ಖಡ್ಸೆ ವಿರುದ್ಧ ವಕೋಲ ಪೊಲೀಸರು ಪ್ರಕರಣ ದಾಖಲಿಸಿದ್ದರು. ಜಲಗಾವ್ ಎಂಬಲ್ಲಿರುವ ಅಂಜಲಿಯ ಸಹವರ್ತಿಯೊಬ್ಬರು ಈ ಭಾಷಣದ ಬಗ್ಗೆ ಅವರ ಗಮನ ಸೆಳೆದ ನಂತರ ಅಂಜಲಿ ಪೊಲೀಸ್ ದೂರು ದಾಖಲಿಸಿದ್ದರು.

ಬಿಜೆಪಿ ನಾಯಕನ ವಿರುದ್ಧ ಎಫ್‍ಐಆರ್ ದಾಖಲಿಸಲೇಬೇಕೆಂದು ಅಂಜಲಿ ಪೊಲೀಸ್ ಠಾಣೆಯಲ್ಲಿ ಧರಣಿ ಕೂಡ ಕುಳಿತಿದ್ದರು.

ಖಡ್ಸೆ ಅವರು ಭಾರೀ ಅಕ್ರಮ ಸಂಪತ್ತು ಕ್ರೋಢೀಕರಿಸಿದ್ದಾರೆಂದು ಆರೋಪಿಸಿ ಅಂಜಲಿ ಮತ್ತಿತರರು ಅವರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ದಾವೆ ಕೂಡ ದಾಖಲಿಸಿದ್ದರು. ಪುಣೆ ಸಮೀಪ ಕೈಗಾರಿಕಾ ಸೈಟ್ ಒಂದನ್ನು ತಮ್ಮ ಪತ್ನಿ ಮತ್ತು ಅಳಿಯನ ಹೆಸರಿನಲ್ಲಿ ಖರೀದಿಸುವ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಖಡ್ಸೆ ಕಳೆದ ಜೂನ್ ತಿಂಗಳಲ್ಲಿ ಕಂದಾಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಅಂಜಲಿಗೆ ಬಂದಿರುವ ಬೆದರಿಕೆ ಕರೆಯನ್ನು ಖಂಡಿಸಿರುವ ಎಎಪಿ ಈ ನಿಟ್ಟಿನಲ್ಲಿ ಉನ್ನತ ತನಿಖೆಗೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News