ಸಿರಿಯ ಪ್ರತಿಪಕ್ಷ ನಾಯಕಿ, ಮಗಳು ಟರ್ಕಿಯಲ್ಲಿ ಹತ್ಯೆ

Update: 2017-09-23 17:20 GMT

ಇಸ್ತಾಂಬುಲ್ (ಟರ್ಕಿ), ಸೆ. 23: ಸಿರಿಯದ ಹಿರಿಯ ಪ್ರತಿಪಕ್ಷ ನಾಯಕಿ ಮತ್ತು ಅವರ ಮಗಳು ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ.

1980ರ ದಶಕದಿಂದಲೂ ಸಿರಿಯದ ಆಡಳಿತಾರೂಢ ಬಾತ್ ಪಕ್ಷದ ವಿರೋಧಿಯಾಗಿರುವ ಒರೂಬಾ ಬರಾಕತ್ ಮತ್ತು ಅವರ ಏಕೈಕ ಮಗಳು, ಪತ್ರಕರ್ತೆ ಹಲ್ಲಾ ಬರಾಕತ್ ಮೃತಪಟ್ಟವರು. ಅವರ ಕುತ್ತಿಗೆಯಲ್ಲಿ ಇರಿದ ಗಾಯಗಳು ಪತ್ತೆಯಾಗಿವೆ.

ಟೆಲಿಫೋನ್ ಕರೆಗೆ ಅವರು ಉತ್ತರಿಸದಿದ್ದಾಗ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದರು. ಉಸ್ಕುಡಾರ್ ಜಿಲ್ಲೆಯಲ್ಲಿರುವ ಅಪಾರ್ಟ್‌ಮೆಂಟ್‌ಗೆ ಬಂದ ಪೊಲೀಸರು ಅವರು ಮೃತಪಟ್ಟಿರುವುದನ್ನು ಪತ್ತೆಹಚ್ಚಿದರು.

ಸಿರಿಯದಲ್ಲಿ 2011ರಲ್ಲಿ ಆಂತರಿಕ ಯುದ್ಧ ಆರಂಭಗೊಂಡ ಬಳಿಕ, ಸುಮಾರು 30 ಲಕ್ಷ ಸಿರಿಯ ನಿರಾಶ್ರಿತರು ಟರ್ಕಿಯಲ್ಲಿ ವಾಸಿಸುತ್ತಿದ್ದಾರೆ. ಅವರ ಪೈಕಿ ಹೆಚ್ಚಿನವರು ಸಿರಿಯ ಅಧ್ಯಕ್ಷ ಬಶರ್ ಅಲ್ ಅಸಾದ್ ಸರಕಾರದ ವಿರೋಧಿಗಳು.

‘‘ಒರೂಬಾ ಪತ್ರಿಕೆಗಳ ಮುಖಪುಟಕ್ಕೆ ಸುದ್ದಿಗಳನ್ನು ನೀಡುತ್ತಿದ್ದರು ಹಾಗೂ ಅವರು ಕ್ರಿಮಿನಲ್‌ಗಳನ್ನು ಬೆಂಬತ್ತಿ ಬಯಲುಗೊಳಿಸುತ್ತಿದ್ದರು. ಇಂದು ಅವರು ಮತ್ತು ಅವರ ಮಗಳು ಮುಖ ಪುಟದ ಸುದ್ದಿಯಾಗಿದ್ದಾರೆ’’ ಎಂದು ಒರೂಬಾರ ಸಹೋದರಿ ಶಾಝಾ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ‘‘ಅವರು ಅನ್ಯಾಯ ಮತ್ತು ನಿರಂಕುಶತೆಯ ಕೈಗಳಿಂದ ಹತ್ಯೆಯಾಗಿದ್ದಾರೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News