ವಿದ್ಯಾರ್ಥಿನಿಯರ ಮೇಲೆ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ,ಹಲವರಿಗೆ ಗಾಯ
ವಾರಣಾಸಿ,ಸೆ.24: ತಮ್ಮ ಸಹವಿದ್ಯಾರ್ಥಿನಿಗೆ ನಡೆದ ಅವಮಾನವನ್ನು ವಿರೋಧಿಸಿ ಬನಾರಸ್ ಹಿಂದು ವಿವಿ(ಬಿಎಚ್‌ಯು)ಯ ವಿದ್ಯಾರ್ಥಿನಿಯರು ಶುಕ್ರವಾರದಿಂದ ನಡೆಸುತ್ತಿರುವ ಪ್ರತಿಭಟನೆಯು ಶನಿವಾರ ರಾತ್ರಿಯೂ ಮುಂದುವರಿದಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ, ಲಾಠಿ ಪ್ರಹಾರ ನಡೆಸಿದ್ದು ಹಲವಾರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ವಿವಿ ಕುಲಪತಿಗಳ ಸೂಚನೆಯ ಮೇರೆಗೆ ಪೊಲೀಸರು ದೌರ್ಜನ್ಯವೆಸಗಿದ್ದಾರೆಂದು ಆರೋಪಿಸಲಾಗಿದ್ದು, ವಿವಿ ಕ್ಯಾಂಪಸ್ ನಲ್ಲಿ ಕರ್ಫ್ಯೂಸದೃಶ ಸ್ಥಿತಿಯಿದೆ.
ಶುಕ್ರವಾರ ಸಂಜೆ ಬೈಕ್‌ಗಳಲ್ಲಿದ್ದ ವಿದ್ಯಾರ್ಥಿಗಳ ಗುಂಪೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಚುಡಾಯಿಸಿತ್ತು. ಗುಂಪು ಆಕೆಯ ಮೈಗೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿತ್ತು. ವಿದ್ಯಾರ್ಥಿನಿಯು ಕೂಗಿಕೊಂಡಿದ್ದರೂ ಸಮೀಪದ ಕ್ಯಾಂಪಸ್‌ಲ್ಲಿದ್ದ ಭದ್ರತಾ ಸಿಬ್ಬಂದಿಗಳು ಆಕೆಯ ನೆರವಿಗೆ ಮುಂದಾಗಿರಲಿಲ್ಲ. ವಿದ್ಯಾರ್ಥಿನಿಯು ಈ ಬಗ್ಗೆ ವಿವಿ ಆಡಳಿತಕ್ಕೆ ದೂರಿಕೊಂಡಿದ್ದಳು. ಆದರೆ ಅದು ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳುವ ಬದಲು ತಡಸಂಜೆಯಲ್ಲಿ ಹೊರಗಿದ್ದಕ್ಕಾಗಿ ವಿದ್ಯಾರ್ಥಿನಿಯನ್ನೇ ಅವಮಾನಿಸಿತ್ತು.
ತಮ್ಮ ಸಹವಿದ್ಯಾರ್ಥಿನಿಗೆ ಅವಮಾನವನ್ನು ವಿರೋಧಿಸಿ ನೂರಾರು ವಿದ್ಯಾರ್ಥಿನಿಯರು ಪ್ರತಿಭಟನೆಗಿಳಿದಿದ್ದರು. ಶನಿವಾರ ಕ್ಯಾಂಪಸ್ ಬಳಿ ಭಾರೀ ಸಂಖ್ಯೆಯಲ್ಲಿ ಪೊಲಿಸರನ್ನು ನಿಯೋಜಿಸಲಾಗಿತ್ತು. ಸಂಜೆಯ ವೇಳೆಗೆ ಕುಲಪತಿ ಜಿ.ಸಿ.ತ್ರಿಪಾಠಿ ಅವರು ಮಹಿಳಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರನ್ನು ಭೇಟಿಯಾಗುವುದಾಗಿ ತಿಳಿಸಿದ್ದರು. ಆದರೆ ರಾತ್ರಿಯಾದರೂ ಅವರು ಬಂದಿರಲಿಲ್ಲ. ಕಾದು ಕುಳಿತಿದ್ದ ವಿದ್ಯಾರ್ಥಿನಿಯರು ಪ್ರತಿಭಟನೆಯನ್ನು ಮುಂದುವರಿಸಲು ಮುಖ್ಯ ಪ್ರವೇಶದ್ವಾರದ ಬಳಿಗೆ ಮರಳಿದ್ದರು. ಈ ವೇಳೆ ಕೆಲವು ವಿದ್ಯಾರ್ಥಿನಿಯರು ಕ್ಯಾಂಪಸ್‌ನೊಳಗಿರುವ ತ್ರಿಪಾಠಿಯವರ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ವಿವಿಯ ಶಿಸ್ತುಪಾಲನಾ ಮಂಡಳಿಯ ಭದ್ರತಾ ಸಿಬ್ಬಂದಿಗಳು ಲಾಠಿ ಪ್ರಹಾರ ನಡೆಸಿ ಅವರನ್ನು ಚದುರಿಸಿದ್ದರು ಮತ್ತು ಅವರನ್ನು ಬಲವಂತದಿಂದ ಹಾಸ್ಟೆಲ್‌ಗಳಿಗೆ ಕಳುಹಿಸಲಾಗಿತ್ತು. ಪ್ರತೀಕಾರ ಕ್ರಮಕ್ಕಿಳಿದ ವಿದ್ಯಾರ್ಥಿನಿಯರು ಅವರತ್ತ ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಕಣಕ್ಕಿಳಿದು ಅವರ ಮೇಲೆ ಮತ್ತೆ ಲಾಠಿ ಪ್ರಹಾರ ನಡೆಸಿದ್ದರು. ಅಶ್ರುವಾಯುವನ್ನೂ ಪ್ರಯೋಗಿಸಲಾಗಿತ್ತು.
ಲಾಠಿಪ್ರಹಾರದಿಂದ ಹಲವಾರು ವಿದ್ಯಾರ್ಥಿನಿಯರು ಗಾಯಗೊಂಡಿದ್ದು, ಕನಿಷ್ಠ 50 ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿವೆ. ಮಹಿಳಾ ಪೊಲೀಸರ ಅನುಪಸ್ಥಿತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ತನ್ಮಧ್ಯೆ ವಿವಿ ಆಡಳಿತವು ಸೋಮವಾರದಿಂದ ಅ.2ರವರೆಗೆ ತರಗತಿಗಳಿಗೆ ರಜೆ ಘೋಷಿಸಿದೆ.
ರವಿವಾರವೂ ವಿದ್ಯಾರ್ಥಿನಿಯರು ವಿವಿಯ ಪ್ರವೇಶದ್ವಾರದ ಬಳಿ ಪ್ರತಿಭಟನೆ ನಡೆಸಿ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿದರು. ಘಟನೆಯಲ್ಲಿ ಕೆಲವು ಪೊಲೀಸರಿಗೂ ಅಲ್ಪಸ್ವಲ್ಪ ಗಾಯಗಳಾಗಿವೆ. ನಿಷೇಧಾಜ್ಞೆಯನ್ನು ಹೇರಲಾಗಿದ್ದು, ಕ್ಯಾಂಪಸ್‌ನಲ್ಲಿ ಕರ್ಫ್ಯೂಸದೃಶ ಸ್ಥಿತಿಯಿದೆ. ವಿದ್ಯಾರ್ಥಿನಿಯರ ಬಲವಂತದಿಂದ ಹಾಸ್ಟೆಲ್‌ಗಳಿಗೆ ತಳ್ಳಿರುವ ಪೊಲೀಸರು ಹೊರಗಿನಿಂದ ಬೀಗ ಹಾಕಿದ್ದು, ಹಾಸ್ಟೆಲ್‌ನ ಹೊರಗೆ ಕಂಡು ಬರುವ ವಿದ್ಯಾರ್ಥಿನಿಯರನ್ನು ಥಳಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.