ಮೊಬೈಲ್ ಐಎಂಇಐ ತಿರುಚಿದರೆ 3 ವರ್ಷ ಜೈಲು

Update: 2017-09-24 16:29 GMT

ಹೊಸದಿಲ್ಲಿ, ಸೆ. 24: ಮೊಬೈಲ್‌ನ ವಿಶಿಷ್ಟ 15 ಅಂಕಿಯ ಸರಣಿ ಸಂಖ್ಯೆ-ಐಎಂಇಐ ಸಂಖ್ಯೆ ತಿರುಚುವುದು ಶಿಕ್ಷಾರ್ಹ ಅಪರಾಧ. ಈ ಅಪರಾಧಕ್ಕೆ 3 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ನೀಡುವ ಅವಕಾಶ ಇದೆ. ಐಎಂಇಐ ಸಂಖ್ಯೆಗಳನ್ನು ನಕಲಿ ಮಾಡುವುದನ್ನು ಹಾಗೂ ಕಳವಾದ ಮೊಬೈಲ್‌ಗಳನ್ನು ಅನಾಯಾಸವಾಗಿ ಪತ್ತೆ ಹಚ್ಚಲು ಸರಕಾರದ ಈ ನಿರ್ಧಾರ ನೆರವಾಗಲಿದೆ.

ಉತ್ಪಾದಕರನ್ನು ಹೊರತುಪಡಿಸಿ ವ್ಯಕ್ತಿಯೋರ್ವ ಮೊಬೈಲ್‌ನ ವಿಶಿಷ್ಟ ಗುರುತು ಸಂಖ್ಯೆ (ಐಎಂಇಐ)ಯನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕುವುದು, ಅಳಿಸಿ ಹಾಕುವುದು, ಬದಲಾಯಿಸುವುದು, ಮಾರ್ಪಡಿಸುವುದು ಕಾನೂನು ಬಾಹಿರವಾಗಿರುತ್ತದೆ ಎಂದು ಟೆಲಿಕಾಂ ಇಲಾಖೆ ಆಗಸ್ಟ್ 25ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಹೇಳಿದೆ.

ಐಎಂಇಐ ಮೊಬೈಲ್‌ನ ಹ್ಯಾಂಡ್‌ಸೆಟ್‌ನ ವಿಶಿಷ್ಟ ಸಂಖ್ಯೆ. ಮೊಬೈಲ್‌ನಲ್ಲಿ ಕರೆ ಮಾಡಿದವರ ಮೊಬೈಲ್ ಸಂಖ್ಯೆ ಹಾಗೂ ಫೋನ್‌ನ ಐಎಂಇಐ ಸಂಖ್ಯೆ ದಾಖಲಾಗುತ್ತದೆ. ಒಂದು ವೇಳೆ ಮೊಬೈಲ್ ಫೋನ್ ಕಳೆದು ಹೋದರೆ ಪತ್ತೆ ಮಾಡಲು ಬಳಕೆದಾರರು ತಮ್ಮ ಐಎಂಇಐ ಸಂಖ್ಯೆ ನೀಡಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News