ಸುಗತ ಅವರಿಗೆ ಸುಸ್ವಾಗತ !

Update: 2017-09-25 12:28 GMT
Editor : ರೋಜ
ಸುಗತ ಶ್ರೀನಿವಾಸರಾಜು

ಖ್ಯಾತ ಪತ್ರಕರ್ತ ಸುಗತ ಶ್ರೀನಿವಾಸರಾಜು ಮತ್ತೆ ಕನ್ನಡ ಪತ್ರಿಕೋದ್ಯಮಕ್ಕೆ ಮರಳುತ್ತಿದ್ದಾರೆ. ನಿಖರವಾಗಿ ಹೇಳಬೇಕೆಂದರೆ ಕನ್ನಡ ಮಾಧ್ಯಮಕ್ಕೆ ಬರುತ್ತಿದ್ದಾರೆ. ಏಕೆಂದರೆ,  ಈ ಬಾರಿ ಅವರು ಬೇರೆಯವರ ಒಡೆತನದ ಯಾವುದೇ ದಿನಪತ್ರಿಕೆಗೆ ಸಂಪಾದಕರಾಗಿ ಬರುತ್ತಿಲ್ಲ. ಎರಡು ಪ್ರಮುಖ ಕನ್ನಡ ಪತ್ರಿಕೆಗಳ ಸಾರಥ್ಯ ವಹಿಸಿ ಅವುಗಳ ಸ್ವರೂಪವನ್ನೇ ಬದಲಿಸಿದ್ದ ಸುಗತ ಈಗ ತಮ್ಮದೇ ಹೊಸ ಮಾಧ್ಯಮವೊಂದನ್ನು ಪ್ರಾರಂಭಿಸುತ್ತಿದ್ದಾರೆ. ಅದಕ್ಕೆ ಅವರು ಆಯ್ದುಕೊಂಡಿರುವುದು ಸದ್ಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗು ಮುದ್ರಣ, ದೃಶ್ಯ ಮಾಧ್ಯಮಗಳು ಅವುಗಳ ಮಾಲಕತ್ವ , ಬಂಡವಾಳ ಇತ್ಯಾದಿಗಳಿಗೆ  ಹೋಲಿಸಿದರೆ ಹೆಚ್ಚು ಸ್ವತಂತ್ರವಾಗಿರುವ  ಡಿಜಿಟಲ್ ಮಾಧ್ಯಮ. 

ಹಿರಿಯ ಪತ್ರಕರ್ತರು ದೊಡ್ಡ ಕಾರ್ಪೊರೇಟ್ ಕುಳಗಳ ಮರ್ಜಿಗೆ ಬೀಳದೆ ಕೈಗೆಟಕುವ ಬಂಡವಾಳದಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ದೊಡ್ಡ ಸಂಖ್ಯೆಯ ಜನರನ್ನು ತಲುಪುವುದು, ಅವರ ಮೇಲೆ ಪ್ರಭಾವ ಬೀರುತ್ತಿರುವುದು ಇತ್ತೀಚಿನ ಟ್ರೆಂಡ್ . ರಾಷ್ಟ್ರ ಮಟ್ಟದಲ್ಲಿ ಖ್ಯಾತರಾಗಿರುವ ಎನ್ ಡಿ ಟಿ ವಿ ಮಾಜಿ ವ್ಯವಸ್ಥಾಪಕ ಸಂಪಾದಕಿ ಬರ್ಖಾ ದತ್ , ಇಂಡಿಯನ್ ಎಕ್ಸ್ ಪ್ರೆಸ್ ಮಾಜಿ ಸಂಪಾದಕ ಶೇಖರ್ ಗುಪ್ತಾ ( ಇಬ್ಬರೂ ಸೇರಿ ‘The Print’ ), ದಿ ಹಿಂದೂ ಮಾಜಿ  ಸಂಪಾದಕ ಸಿದ್ಧಾರ್ಥ್ ವರದರಾಜನ್ ( thewire), ಸಿ ಎನ್ ಎನ್ ಐಬಿಎನ್ ಮಾಜಿ ಸಂಪಾದಕ ರಾಜದೀಪ್ ಸರ್ದೇಸಾಯಿ ( ಇಂಡಿಯಾ ಟುಡೇಯಲ್ಲಿ ಅವರದ್ದು ಸಲಹಾ ಸಂಪಾದಕನ ಪಾತ್ರ , ಅವರು ಈಗ ಚರ್ಚೆಯಲ್ಲಿರುವುದು ಫೇಸ್ ಬುಕ್ ಲೈವ್ ಹಾಗು ಟ್ವೀಟ್ ಗಳ ಮೂಲಕ ), ಬೊಫೋರ್ಸ್ ಖ್ಯಾತಿಯ ಚಿತ್ರಾ ಸುಬ್ರಮಣ್ಯನ್ ( ದಿ ನ್ಯೂಸ್ ಮಿನಿಟ್ ) ಹೀಗೆ ಪಟ್ಟಿ ಬೆಳೆಯುತ್ತದೆ. ಇವರೆಲ್ಲರೂ ಬಹುಆವೃತ್ತಿಗಳ , ರಾಷ್ಟ್ರ ಮಟ್ಟದಲ್ಲಿ ಪ್ರಭಾವಿಯಾಗಿರುವ ದೊಡ್ಡ ದಿನಪತ್ರಿಕೆಗಳು ಅಥವಾ ಚಾನಲ್ ಗಳಲ್ಲಿ ನಿರ್ಣಾಯಕ ಪಾತ್ರವಹಿಸಿದವರು.

(ವಿನೋದ್ ಮೆಹ್ತಾ ಅವರೊಂದಿಗೆ ಸುಗತ)

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಬೃಹತ್ ಮಾಧ್ಯಮ ಸಂಸ್ಥೆಗಳ ಹೂಡಿಕೆದಾರರು ಬದಲಾಗುವಾಗ ಅಲ್ಲಿಂದ ಅನಿವಾರ್ಯವಾಗಿ ನಿರ್ಗಮಿಸಿದವರು. ಆಗ ಇವರೆಲ್ಲರ ಚಿತ್ತ ಹರಿದಿದ್ದು ಡಿಜಿಟಲ್ ಮೀಡಿಯಾದತ್ತ. ಪತ್ರಿಕೆ, ಟಿವಿ ಚಾನಲ್ ಗಳಿಗೆ ಹೋಲಿಸಿದರೆ ಕಡಿಮೆ ಬಂಡವಾಳ ಆದರೆ 'ರೀಚ್' ವಿಷಯದಲ್ಲಿ ಅವುಗಳಷ್ಟೇ ಅಥವಾ ಕೆಲವೊಮ್ಮೆ ಅವುಗಳಿಗಿಂತ ಹೆಚ್ಚು ಪ್ರಭಾವಿ ಆಗಿರುವ ಡಿಜಿಟಲ್ ಮಾಧ್ಯಮ ಸಹಜವಾಗಿ ಈಗ ಸೂಕ್ತ ಪರ್ಯಾಯವಾಗಿ ಕಂಡಿದೆ. ಟಿವಿ ಚಾನಲ್ ಮೂಲಕ ಇಡೀ ಭಾರತವೇ ನನ್ನ ಕೈಯಲ್ಲಿದೆ ಎಂಬಂತೆ ವರ್ತಿಸುತ್ತಿದ್ದ ಅರ್ನಬ್ ಗೋಸ್ವಾಮಿಯ ಬಂಡವಾಳ ಬಯಲಾಗಿ ಅವರು ಸಂಪೂರ್ಣ ನಗ್ನರಾಗಿದ್ದು ಸಾಮಾಜಿಕ ಜಾಲತಾಣಗಳಲ್ಲೇ. scroll.in , the wire, the news minute, catchnews , the quint, altnews ಇತ್ಯಾದಿ ವೆಬ್ ಸೈಟ್ ಗಳು ಆಳುವವರಿಗೆ ಹಾಕುತ್ತಿರುವ ಪ್ರಶ್ನೆಗಳು ಹಾಗು ಅವುಗಳು ರೂಪಿಸಿರುವ ಚರ್ಚೆ ಈ ಕ್ಷೇತ್ರಕ್ಕೆ ಇನ್ನಷ್ಟು ವೃತ್ತಿಪರರು ಬರಲು ಪ್ರೇರೇಪಣೆಯಾಗಿದೆ.

ಇದೇ ಹಾದಿಯಲ್ಲಿ ಹೆಜ್ಜೆ ಹಾಕಿರುವ ಇನ್ನೊಂದು ಪ್ರಮುಖ ಹೆಸರು ಸುಗತ ಶ್ರೀನಿವಾಸರಾಜು ಅವರದ್ದು. ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ವೃತ್ತಿ ಜೀವನ ಪ್ರಾರಂಭಿಸಿ ಎರಡು ದೊಡ್ಡ  ಕನ್ನಡ ಪತ್ರಿಕೆಗಳ ಸಂಪಾದಕರಾದ ದಾಖಲೆ  ಸುಗತ ಅವರದ್ದು. ಈಗ ಅವರು ಇನ್ನೊಂದು ದಾಖಲೆ ಬರೆಯುತ್ತಿದ್ದಾರೆ. ಕನ್ನಡದ ಪ್ರಮುಖ ಮಾಜಿ ಸಂಪಾದಕರೊಬ್ಬರು ಸ್ವತಂತ್ರ  ಡಿಜಿಟಲ್ ಮಾಧ್ಯಮದ ಮೂಲಕ ಮತ್ತೆ ಮಾಧ್ಯಮ ಕ್ಷೇತ್ರಕ್ಕೆ ಬರುತ್ತಿರುವುದು ಒಂದು ಮುಖ್ಯ ಬೆಳವಣಿಗೆ. ಈಗ ಕನ್ನಡದಲ್ಲಿ ಸುದ್ದಿ ವೆಬ್ ಸೈಟ್ ಗಳು ದಿನಕ್ಕೆರಡರಂತೆ ಬರುತ್ತಿವೆ.    ಆದರೆ thestate.news ಆಗಮನ ಕನ್ನಡ ಪತ್ರಿಕೋದ್ಯಮದ ಪಾಲಿಗೆ ಒಂದು ಪ್ರಮುಖ ಬೆಳವಣಿಗೆ. ಇದಕ್ಕೆ ಕಾರಣ - ಸುಗತ ಶ್ರೀನಿವಾಸರಾಜು

ಖ್ಯಾತ ಕನ್ನಡ ಮೇಷ್ಟ್ರು ಶ್ರೀನಿವಾಸರಾಜು ಅವರ  ಪುತ್ರ ಸುಗತ ಪತ್ರಕರ್ತನಾಗಿ ಕೆಲಸ ಪ್ರಾರಂಭಿಸಿದ್ದು  ಡೆಕ್ಕನ್ ಹೆರಾಲ್ಡ್ ಮೂಲಕ. ಬಳಿಕ ಲಂಡನ್ ನಲ್ಲಿ ಕೆಲಕಾಲ ಐರಿಶ್ ಟೈಮ್ಸ್ ನಲ್ಲಿ ಸೇವೆ ಸಲ್ಲಿಸಿದರು. ಬಳಿಕ ದಿಲ್ಲಿಯ ಹಿಂದೂಸ್ತಾನ್ ಟೈಮ್ಸ್ ನಲ್ಲಿದ್ದ ಸುಗತ ತಮ್ಮ ಛಾಪು ಮೂಡಿಸಿದ್ದು ಔಟ್ ಲುಕ್ ನಿಯತಕಾಲಿಕದಲ್ಲಿ. ವಿನೋದ್ ಮೆಹ್ತಾ ಗರಡಿಯಲ್ಲಿ ಪಳಗಿದ ಸುಗತ ಔಟ್ ಲುಕ್ ನ ಹಿರಿಯ ಸಹಸಂಪಾದಕರಾಗಿ ಮಹತ್ವದ ಸ್ಟೋರಿಗಳನ್ನು ಮಾಡಿದವರು. ಅದರ ಸಂಪಾದಕೀಯ ವಿಭಾಗದಲ್ಲಿ ಪ್ರಭಾವಿಯಾಗಿ ಬೆಳೆದವರು. ಅಲ್ಲಿಂದ ಹಠಾತ್ತನೆ ಟೈಮ್ಸ್ ಗ್ರೂಪ್ ನ ವಿಜಯ ಕರ್ನಾಟಕ ದೈನಿಕದ ಸಂಪಾದಕರಾಗಿ ಕನ್ನಡಕ್ಕೆ ಬಂದ ಸುಗತ ಆ ಪತ್ರಿಕೆಗೆ ಸಂಪೂರ್ಣ  ಹೊಸ ರೂಪ ಕೊಟ್ಟರು ಮತ್ತು ಅದರಲ್ಲಿ ಗೆದ್ದರು. ಟೈಮ್ಸ್ ಬಳಗದಲ್ಲಿ ಸಂಪಾದಕರಿಗಿರುವ ಸ್ವಾತಂತ್ರ್ಯ ಹಾಗು ಅದರ ಮಿತಿ - ಇವೆರಡನ್ನೂ ಅತ್ಯಂತ ಚೆನ್ನಾಗಿ ಅರ್ಥಮಾಡಿಕೊಂಡು ಪತ್ರಿಕೆಯನ್ನು ಕಟ್ಟಿದ್ದು ಅವರ ಹೆಗ್ಗಳಿಕೆ.   ವಿಷಯಗಳ ಆಳವಾದ ವಿಶ್ಲೇಷಣೆ, ಸುದ್ದಿಗಳಲ್ಲಿ ವಸ್ತುನಿಷ್ಠತೆಗೆ ಆದ್ಯತೆ ಹಾಗು ಸೂಕ್ತ ಪ್ರಾತಿನಿಧ್ಯ ನೀಡಿ , ಹೊಸ ಬರಹಗಾರರನ್ನು ಪರಿಚಯಿಸಿ , ಬೆಳೆಸಿದ ಸುಗತ ವಿಜಯ ಕರ್ನಾಟಕವನ್ನು ಸೀಮಿತ ವ್ಯಾಪ್ತಿಯಿಂದ ಹೊರಗೆ ತೆಗೆದುಕೊಂಡು ಹೋಗಿ ನಿಜವಾದ ಅರ್ಥದಲ್ಲಿ ಅದನ್ನು ಕರ್ನಾಟಕದ, ಕನ್ನಡಿಗರ ಪತ್ರಿಕೆಯಾಗಿ ರೂಪಿಸಿದರು.

ಅಲ್ಲಿಂದ ಕನ್ನಡ ಪ್ರಭ ಪತ್ರಿಕೆ  ಹಾಗು ಸುವರ್ಣ ನ್ಯೂಸ್ 24 x 7 ಚಾನಲ್  ಗಳ ಸಂಪಾದಕೀಯ ನಿರ್ದೇಶಕರಾಗಿ ಬಂದ ಸುಗತ ಅಲ್ಲೂ ತಮ್ಮತನವನ್ನು ಬಿಟ್ಟು ಕೊಡಲಿಲ್ಲ. ಕನ್ನಡ ಪ್ರಭದ ಸಂಪಾದಕೀಯ ಹಾಗು ಒಪೆಡ್ ಪುಟಗಳನ್ನು ಸಂಕುಚಿತ ಮೇರೆಗಳನ್ನು ಮೀರಿ, ಮುಕ್ತ ಸಂವಾದದ ವೇದಿಕೆಯಾಗಿ ಬೆಳೆಸಿ ಓದುಗರಿಗೆ ತಲುಪಿಸಿದ್ದನ್ನು ಕನ್ನಡಿಗರು ಮರೆತಿಲ್ಲ. ಇನ್ನು ಪುಟ ವಿನ್ಯಾಸ, ಸುದ್ದಿ ನಿರೂಪಣೆ ಇತ್ಯಾದಿಗಳಲ್ಲೂ ಕನ್ನಡಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟವನ್ನು ತಂದವರು ಸುಗತ. ಕನ್ನಡ, ಇಂಗ್ಲಿಷ್ ಲೇಖಕರಾಗಿ, ಅನುವಾದಕರಾಗಿಯೂ ಸುಗತ ಹೆಸರು ಮಾಡಿದ್ದಾರೆ.

ಈಗ ಸುಗತ ಹೊಸ ವೆಬ್ ಸೈಟ್ ನೊಂದಿಗೆ ಬರುತ್ತಿದ್ದಾರೆ. ಇದರ ಹೆಸರೇ ವಿಭಿನ್ನವಾಗಿದೆ. thestate.news.  ಇನ್ನು ಇದರ ಹೂರಣವೂ ಈಗಿರುವ ಕನ್ನಡ ವೆಬ್ ಸೈಟ್ ಗಳಿಗಿಂತ ಸಂಪೂರ್ಣ ಭಿನ್ನವಾಗಿರಲಿದೆ ಎಂಬುದನ್ನು ಅವರ ಹೊಸ ವೆಬ್ ಸೈಟ್ ನಲ್ಲಿರುವ  " ನಮ್ಮ ತಾಲೀಮು, ತಯ್ಯಾರಿ " ( ಬರಹ ಕೊನೆಯಲ್ಲಿದೆ ) ಪರಿಚಯ ಬರಹ ಸ್ಪಷ್ಟಪಡಿಸಿದೆ. ಈ ಬರಹ ಕನ್ನಡದ ಓದುಗರಲ್ಲಿ ಒಂದು ಹೊಸ ನಿರೀಕ್ಷೆಯನ್ನು ಸೃಷ್ಟಿಸಿದೆ.

ಈಗಿರುವ ಮಾಹಿತಿ ಪ್ರಕಾರ ಇದು  ಬ್ರೇಕಿಂಗ್ ನ್ಯೂಸ್ ನೀಡುವ ಸುದ್ದಿ ವೆಬ್ ಸೈಟ್ ಗಳಿಗಿಂತ ಬೇರೆ ನಿಂತು ಸಮಗ್ರ ಸುದ್ದಿ, ಅದರ ಹಿನ್ನೆಲೆ ನೀಡಿ ,  ಸುಳ್ಳು, ಸತ್ಯಗಳ ನಡುವಿನ ತಿಳಿಗೆರೆಯನ್ನು ಶೋಧಿಸುವ ತಾಣ. ವಾದ, ವಿವಾದ ಹಾಗು ಸಂವಾದಗಳ ವೇದಿಕೆ. ಇನ್ನು ಈಗಿರುವಂತೆ ಯಾವುದೇ ಪತ್ರಿಕೆಯ ವೆಬ್ ಸೈಟ್ ಇದಲ್ಲ. ಹಾಗಾಗಿ 'ಸೀರಿಯಸ್ ಜರ್ನಲಿಸಂ' ಮಾಡುವ ಒಂದು ಸ್ವತಂತ್ರ ವೆಬ್ ಪೋರ್ಟಲ್  ಇದಾಗಲಿದೆ ಎಂಬುದು ಈ ತಾಣದ  ಟೀಮ್ ನಲ್ಲಿರುವವರ ಅಭಿಪ್ರಾಯ.

ಓದುವ ( ಸುದ್ದಿ), ನೋಡುವ ( ವೀಡಿಯೊ), ಕೇಳುವ ( ಆಡಿಯೋ ) ಜೊತೆಗೆ ಯೋಚಿಸುವಂತೆ ಮಾಡುವ  ಸುದ್ದಿ ನೀಡುವ ವೆಬ್ ಸೈಟ್ ಇದು ಎಂದಿದ್ದಾರೆ ಸುಗತ. ಇದು ಕೇವಲ ಸುದ್ದಿ ತಾಣವಲ್ಲ ಎಂದೂ ನೆನಪಿಸಿದ್ದಾರೆ ಅವರು. ಹಾಗಾಗಿ ಈ ಹೊಸ ತಾಣದ ಬಗ್ಗೆ ಕನ್ನಡದ ಓದುಗರು , ವೀಕ್ಷಕರಲ್ಲಿ ಕುತೂಹಲ ಖಚಿತ. ಈ ವೆಬ್ ಸೈಟ್  ಫರ್ಸ್ಟ್ ಪರ್ಸನ್ ಮೀಡಿಯಾ ವೆಂಚರ್ಸ್ ಪ್ರೈ ಲಿ. ಎಂಬ ಕಂಪೆನಿ ಮೂಲಕ ಪ್ರಾರಂಭವಾಗುತ್ತಿದೆ .  ಅಂದಹಾಗೆ, ಕನ್ನಡ ವೆಬ್ ಸೈಟ್ ಬೆನ್ನಿಗೇ ಸುಗತ ನೇತೃತ್ವದಲ್ಲಿ  ಇಂಗ್ಲಿಷ್ ವೆಬ್ ಸೈಟ್ thegoodstate.com ಕೂಡ ಬರಲಿದೆ.

thestate.news ಮೂಲಕ ಕನ್ನಡಕ್ಕೊಂದು ವಿಶಿಷ್ಟ ವೆಬ್ ಸೈಟ್ ಬರಲಿ. ಹಾಗೇ , thegoodstate.com ಮೂಲಕ ಕನ್ನಡಿಗರಿಂದ ಇಂಗ್ಲಿಷ್ ಗೆ ಇನ್ನೊಂದು ಒಳ್ಳೆಯ ವೆಬ್ ಸೈಟ್ ಸಿಗಲಿ.

ಸುಗತ ಅವರಿಗೆ ಸುಸ್ವಾಗತ !

Writer - ರೋಜ

contributor

Editor - ರೋಜ

contributor

Similar News