ವಾರಣಾಸಿ:ತೀಸ್ತಾ ಸೆಟ್ಲವಾಡ್ ಬಂಧನ

Update: 2017-09-25 17:15 GMT

ಹೊಸದಿಲ್ಲಿ,ಸೆ.25: ಉತ್ತರ ಪ್ರದೇಶದ ವಾರಣಾಸಿ ಪೊಲೀಸರು ಬನಾರಸ ಹಿಂದು ವಿವಿ(ಬಿಎಚ್‌ಯು)ಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ತನ್ನನ್ನು ತಪ್ಪಾಗಿ ವಶಕ್ಕೆ ತೆಗೆದುಕೊಂಡಿದ್ದರು ಎಂದು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟ್ಲವಾಡ್ ಅವರು ಸೋಮವಾರ ತಿಳಿಸಿದ್ದಾರೆ. ಅದು ವಿಧ್ಯುಕ್ತ ಬಂಧನವಾಗಿರಲಿಲ್ಲ ಎಂದು ಅವರು ಬಳಿಕ ಹೇಳಿದ್ದಾರೆ.

‘‘ಸ್ವಾತಂತ್ರವು ಮೊಟಕುಗೊಂಡಿದೆ. ಇಲ್ಲಿ ವಾರಣಾಸಿ ಪೊಲೀಸರು ಮತ್ತು ಸ್ಥಳೀಯ ಎಸ್‌ಡಿಎಂ ನನಗೆ ಘೇರಾವ್ ಹಾಕಿದ್ದಾರೆ. ಅವರು ಮುಂಜಾಗ್ರತಾ ಕ್ರಮವಾಗಿ ನನ್ನನ್ನು ವಶಕ್ಕೆ ತೆಗೆದುಕೊಂಡಿದ್ದಾರೋ ಅಥವಾ ಬಂಧಿಸಿದ್ದಾರೋ ಎನ್ನುವುದು ತಿಳಿಯುತ್ತಿಲ್ಲ. ಇನ್ನೂ ಎಷ್ಟು ಕಾಲ ಸ್ವಾತಂತ್ರವನ್ನು ಹತ್ತಿಕ್ಕಲಾಗುತ್ತದೆ?’’ ಎಂದು ತೀಸ್ತಾ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. 10 ಗಂಟೆಗಳ ಕಾಲ ತನ್ನನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದ ಪೊಲೀಸರು ಬಳಿಕ ಬಿಡುಗಡೆಗೊಳಿಸಿದ್ದಾರೆ ಎಂದಿದ್ದಾರೆ.

ತಾನು ವಾರಣಾಸಿಯ ರಾಜಘಾಟ್‌ನಲ್ಲಿ ಯುವ ತರಬೇತಿ ಕಾರ್ಯಕ್ರಮಕ್ಕೆ ತಲುಪದಂತೆ ತನ್ನನ್ನು ಬಂಧಿಸಲು ಮೇಲಿನ ಅಧಿಕಾರಿಗಳಿಂದ ಆದೇಶವಿದೆ ಎಂದು ಜಿಲ್ಲಾಧಿಕಾರಿ ಸುನಿಲ್ ವರ್ಮಾ ತನಗೆ ತಿಳಿಸಿದ್ದಾಗಿ ಫೇಸ್‌ಬುಕ್ ಲೈವ್ ವೀಡಿಯೋದಲ್ಲಿ ತೀಸ್ತಾ ಹೇಳಿದ್ದಾರೆ.

ಆದರೆ ತೀಸ್ತಾರನ್ನು ಬಂಧಿಸಿರುವ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ವಾರಣಾಸಿ ಪೊಲೀಸರು ತಿಳಿಸಿದ್ದಾರೆ.

ತಮ್ಮ ಸಹವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಮತ್ತು ಈ ಬಗ್ಗೆ ವಿವಿ ಆಡಳಿತದ ಅಸಡ್ಡೆಯ ಧೋರಣೆಯನ್ನು ವಿರೋಧಿಸಿ ಬಿಎಚ್‌ಯು ವಿದ್ಯಾರ್ಥಿನಿಯರು ಕಳೆದ ಶುಕ್ರವಾರದಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

 ಒಂದು ತಿಂಗಳ ಹಿಂದೆಯೇ ನಿಗದಿಯಾಗಿದ್ದ ಸಮಾಜವಾದಿ ಜನ ಪರಿಷದ್ ಯುವ ತರಬೇತಿ ಕಾರ್ಯಕ್ರಮಕ್ಕಾಗಿ ತಾನು ವಾರಣಾಸಿಗೆ ಆಗಮಿಸಿದ್ದಾಗಿ ಹೇಳಿರುವ ತೀಸ್ತಾ,‘‘ನೀವು ಬಿಎಚ್‌ಯುಗೆ ಹೋಗುತ್ತೀರಾ ಎಂದು ಬೆಳಿಗ್ಗೆಯಿಂದಲೂ ಎಲ್ಲರೂ ತನ್ನನ್ನು ಪ್ರಶ್ನಿಸುತ್ತಿದ್ದಾರೆ. ಇದು ಮುಕ್ತ ರಾಷ್ಟ್ರವೇ ಎನ್ನುವುದು ತನಗೆ ತಿಳಿಯುತ್ತಿಲ್ಲ’’ ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News