ಫರಂಗಿಪೇಟೆ: ಗ್ಯಾಂಗ್ ವಾರ್‌ಗೆ ಇಬ್ಬರು ಬಲಿ

Update: 2017-09-26 05:48 GMT

ಮಂಗಳೂರು, ಸೆ.26: ಫರಂಗಿಪೇಟೆಯಲ್ಲಿ ಸೋಮವಾರ ರಾತ್ರಿ ನಡೆದ ಗ್ಯಾಂಗ್ ವಾರ್‌ಗೆ ಇಬ್ಬರು ಬಲಿಯಾಗಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರನ್ನು ಅಡ್ಯಾರ್‌ಕಟ್ಟೆ ನಿವಾಸಿ ರಿಯಾಝ್ ಯಾನೆ ಝಿಯಾ ಮತ್ತು ಅಡ್ಯಾರ್ ಬಿರ್ಪುಗುಡ್ಡೆ ನಿವಾಸಿ ಫಯಾಝ್ ಯಾನೆ ಪಯ್ಯ ಎಂದು ಗುರುತಿಸಲಾಗಿದೆ.

ರಿಯಾಝ್, ಫಯಾಝ್, ಮುಷ್ತಾಕ್, ಫಝಲ್, ಅನೀಸ್ ಮತ್ತು ಅಝ್ಮಾನ್ ಎಂಬವರು ಸೋಮವಾರ ರಾತ್ರಿ ಸ್ವಿಫ್ಟ್ ಕಾರಿನಲ್ಲಿ ಅಡ್ಯಾರ್‌ನಿಂದ ಬಿ.ಸಿ.ರೋಡ್ ಕಡೆಗೆ ಬರುತ್ತಿದ್ದ ವೇಳೆ ಈ ಗ್ಯಾಂಗ್ ವಾರ್ ನಡೆದಿದೆ. ಕಾರು ಫರಂಗಿಪೇಟೆ ಮಾರ್ಗವಾಗಿ ಬರುತ್ತಿದ್ದಂತೆ ಫರಂಗಿಪೇಟೆಯಲ್ಲಿರುವ ಪೊಲೀಸ್ ಹೊರ ಠಾಣೆಯ ಬಳಿ ಇನ್ನೊಂದು ತಂಡ ಇವರ ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಪರಿಣಾಮವಾಗಿ ಕಾರಿನಲ್ಲಿದ್ದವರ ಪೈಕಿ ಫಯಾಝ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ರಿಯಾಝ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮುಷ್ತಾಕ್, ಫಝಲ್ ಮತ್ತು ಅನೀಸ್ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳಲ್ಲಿ ಮುಷ್ತಾಕ್ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ. ಅಝ್ಮಾನ್ ಹಲ್ಲೆಕೋರರ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ತಂಡದಲ್ಲ್ಲಿ ಆರು ಮಂದಿ ಇದ್ದರೆಂದು ಹೇಳಲಾಗಿದ್ದು, ಹಲ್ಲೆ ನಡೆಸಿ ಇನ್ನೋವಾ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ತಿಳಿಸಿದ್ದಾರೆ.

ಪೂರ್ವದ್ವೇಷ ಹಲ್ಲೆಗೆ ಕಾರಣ
ಎರಡೂ ತಂಡಗಳ ನಡುವಿನ ಪೂರ್ವ ದ್ವೇಷವೇ ಹಲ್ಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಐದು (2012) ವರ್ಷಗಳ ಹಿಂದೆ ಝಿಯಾ ಗ್ಯಾಂಗಿನ ಕಣ್ಣೂರು ಪುತ್ತ ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಇಜಾಝ್ ಕಣ್ಣೂರು ಎಂಬಾತ ಆರೋಪಿಯಾಗಿದ್ದ. 2014ರ ಅಕ್ಟೋಬರ್ 31ರಂದು ಇಜಾಝ್ ನನ್ನು ಕಣ್ಣೂರಿನಲ್ಲಿ ಸೆಲೂನಿನಲ್ಲಿ ಗಡ್ಡ ತೆಗೆಸುತ್ತಿದ್ದ ವೇಳೆ ಸೆಲೂನ್ ಒಳನುಗ್ಗಿದ ತಂಡವೊಂದು ಕೊಚ್ಚಿ ಕೊಲೆಗೈದಿತ್ತು. ಈ ಕೃತ್ಯದ ಆರೋಪಿಗಳಾಗಿ ಝಿಯಾ ಅಡ್ಯಾರ್ ಹಾಗೂ ಆತನ  ನೇತೃತ್ವದ ತಂಡದ ಹಲವರು ಬಂಧಿಸಲ್ಪಟ್ಟಿದ್ದರು. ಇದೀಗ ಝಿಯಾ ಅಡ್ಯಾರ್ ಕೂಡಾ ಇದೇ ಗ್ಯಾಂಗ್ವಾರ್ ಸರಣಿಗೆ ಬಲಿಯಾಗಿದ್ದು, ದ್ವೇಷದ ಸರಣಿ ಮುಂದಿವರಿದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸಹಿತ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ದಾಳಿ ನಡೆಸಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತನಿಖೆಗೆ ಮೂರು ತಂಡ ರಚನೆ: ದ.ಕ. ಎಸ್ಪಿ 

ಫರಂಗಿಪೇಟೆಯಲ್ಲಿ ಸೋಮವಾರ ರಾತ್ರಿ ನಡೆದ ಗ್ಯಾಂಗ್ ವಾರ್‌ ಪ್ರಕರಣದ ತನಿಖೆಗೆ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ದ.ಕ. ಎಸ್ಪಿ ಸುಧೀರ್ ರೆಡ್ಡಿ ತಿಳಿಸಿದ್ದಾರೆ.

ಒಂದು ತನಿಖಾ ತಂಡ ಹಂತಕರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಇನ್ನೆರಡು ತಂಡಗಳು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದೆ ಎಂದವರು ವಿವರಿಸದರು.

ಈ ನಡುವೆ ಹಂತಕರು ಕಾಸರಗೋಡಿನ ಮೂಲಕ ಕೇರಳಕ್ಕೆ ಪರಾರಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News