ರಸ್ತೆಗೆ ಡಾಮರ್ ಹುಡಿಯಾದರೂ ಹಾಕಿಸಿ ಕೊಡುವಿರಾ?

Update: 2017-09-26 09:43 GMT

* 2 ದಿನಗಳಲ್ಲಿ ಅಂದಾಜುಪಟ್ಟಿ ತಯಾರಿಸಲು ಸೂಚನೆ
ಮಂಗಳೂರು, ಸೆ.26: ‘‘ನಮ್ಮದು ಮಣ್ಣಿನ ರಸ್ತೆ, ಈ ರಸ್ತೆಯಲ್ಲಿ ನಡೆದಾಡಲು ಮಾತ್ರವಲ್ಲ, ಆ್ಯಂಬುಲೆನ್ಸ್ ಬರಲೂ ಸಾಧ್ಯವಾಗುತ್ತಿಲ್ಲ. ನಗರದ ಬೇರೆ ಯಾವುದೇ ರಸ್ತೆಗಾದರೂ ಕಾಂಕ್ರಿಟ್ ಹಾಕುವಾಗ ಅಲ್ಲಿರುವ ತೆಗೆದ ಡಾಮರ್ ಹುಡಿಯನ್ನಾದರೂ ನಮ್ಮ ರಸ್ತೆಗೆ ಹಾಕಿಸಿ ಕೊಡುವಿರಾ?’’

ಹೀಗೊಂದು ಮನವಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್‌ರವರ ಇಂದು ನಡೆದ ಪೋನ್ ಇನ್ ಕಾರ್ಯಕ್ರಮದಲ್ಲಿ ಜಪ್ಪಿನ ಮೊಗರು ನಿವಾಸಿ ವಾಲ್ಟರ್ ಡಿಸೋಜರ ಕಳಕಳಿಯ ಮನವಿ ಇದಾಗಿತ್ತು.

‘‘ನಮ್ಮ ರಸ್ತೆ 500 ಮೀಟರ್ ಉದ್ದವಿದೆ. ಸುಮಾರು 25ರಷ್ಟು ಮನೆಗಳಿವೆ’’ ಎಂದು ತಮ್ಮ ಪ್ರಶ್ನೆಗೆ ವಾಲ್ಟರ್ ಉತ್ತರಿಸಿದಾಗ, ತಕ್ಷಣ ಪ್ರತಿಕ್ರಿಯಿಸಿದ ಮೇಯರ್, ಆ ರಸ್ತೆಗೆ ಡಾಮರೀಕರಣಕ್ಕೆ ಎರಡು ದಿನಗಳೊಳಗೆ ಅಂದಾಜುಪಟ್ಟಿ ತಯಾರಿಸಿ ತಮಗೆ ನೀಡುವಂತೆ ತಿಳಿಸಿದರು.

► 5 ತಿಂಗಳಿನಿಂದ ನೀರಿನ ಬಿಲ್ ಬಂದಿಲ್ಲ!
ಕಳೆದ ಐದು ತಿಂಗಳಿನಿಂದ ಸುಮಾರು 20 ಮನೆಗಳಿಗೆ ನೀರಿನ ಬಿಲ್ ಬಂದಿಲ್ಲ. ನೀರಿನ ಬಿಲ್ ಕಟ್ಟದಿದ್ದರೆ ನೀರಿನ ಸಂಪರ್ಕ ಕಡಿತಗೊಳಿಸುವುದಾಗಿ ನೀವು ತಿಳಿಸಿದ್ದೀರಾ. ಬಿಲ್ ಬರದೆ ಪಾವತಿಸುವುದು ಹೇಗೆ ಎಂದು ಮೇರಿಹಿಲ್‌ನ ವಿನ್ಸೆಂಟ್ ಗೋವಿಯಸ್ ಎಂಬವರು ಮೇಯರನ್ನು ಪ್ರಶ್ನಿಸಿದರು. ನೀರಿನ ಬಿಲ್ ಒದಗಿಸಲು ವ್ಯವಸ್ಥೆ ಮಾಡಿಸುವುದಾಗಿ ಮೇಯರ್ ತಿಳಿಸಿದರು.

►ಸರ್ವಿಸ್ ರಸ್ತೆ ದುರಸ್ತಿಗೆ ಆಗ್ರಹ
ಕುಂಟಿಕಾನದ ಭಾರತ್ ಮೋಟಾರ್ಸ್ ಬಳಿಯ ಸರ್ವಿಸ್ ರಸ್ತೆ ಹದಗೆಟ್ಟಿದ್ದು, ದುರಸ್ತಿಗೊಳಿಸುವಂತೆ ಸಾರ್ವಜನಿಕರೊಬ್ಬರ ದೂರಿಗೆ ಪ್ರತಿಕ್ರಿಯಿಸಿದ ಮೇಯರ್, ಈಗಾಗಲೇ ಆ ರಸ್ತೆಗೆ 19 ಲಕ್ಷ ರೂ. ವೆಚ್ಚದಲ್ಲಿ ಡಾಮರೀಕರಣಕ್ಕೆ ಅಂದಾಜುಪಟ್ಟಿ ತಯಾರಿಸಲಾಗಿದೆ ಎಂದು ತಿಳಿಸಿದರು.

►ಜನವಸತಿ ಪ್ರದೇಶದಲ್ಲಿ ಸಿಮೆಂಟ್ ಗೋದಾಮು
ಶಕ್ತಿನಗರದ ಮಹಿಳೆಯೊಬ್ಬರು ಕರೆ ಮಾಡಿ, ತಮ್ಮ ಮನೆ ಸೇರಿದಂತೆ ಜನವಸತಿ ಪ್ರದೇಶವಾಗಿರುವ ಜಾಗದಲ್ಲಿ ಸಿಮೆಂಟ್ ಗೋದಾಮು ಇರುವುದರಿಂದ ಧೂಳುಮಯ ವಾತಾವರಣ ಆ ಪ್ರದೇಶದಲ್ಲಿ ಸೃಷ್ಟಿಯಾಗಿದೆ. ಇದಕ್ಕೆ ಪರಿಹಾರ ಒದಗಿಸಬೇಕು ಎಂದು ಹೇಳಿದರು.
ಈ ಬಗ್ಗೆ ಪರಿಶೀಲನೆ ನಡೆಸಿ ಜನರಿಗೆ ಸಮಸ್ಯೆ ಆಗುವುದಿದ್ದಲ್ಲಿ ಅಂತಹ ಗೋದಾಮಿನ ಪರವಾನಿಗೆಯನ್ನು ರದ್ದುಪಡಿಸುವುದಾಗಿ ಹೇಳಿದರು.
ಕಂಕನಾಡಿ ಬೈಪಾಸ್ ರಸ್ತೆ ತೀರಾ ಹದಗೆಟ್ಟಿದ್ದು, ದುರಸ್ತಿ ಮಾಡಲಾಗಿಲ್ಲ ಎಂದು ಸಾರ್ವಜನಿಕರು ದೂರಿದಾಗ, ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎರಡು ದಿನಗಳೊಳಗೆ ಕಾಮಗಾರಿ ಆರಂಭವಾಗಲಿದೆ ಎಂದರು.

►ಕೂಳೂರು- ಸುರತ್ಕಲ್ ನಡುವೆ ಬಸ್ಸು ತಂಗುಣವಿಲ್ಲ!
ಕೂಳೂರು ಸೇತುವೆಯಿಂದ ಹಿಡಿದು ಸುರತ್ಕಲ್‌ವರೆಗಿನ ಹೆದ್ದಾರಿಯಲ್ಲಿ ಬಸ್ಸು ತಂಗುದಾಣವೇ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಬೈಕಂಪಾಡಿಯ ರಮೀಝ್ ಎಂಬವರು ದೂರವಾಣಿ ಮೂಲಕ ಆಗ್ರಹಿಸಿದರು.
ಮೇಯರ್ ಕವಿತಾ ಸನಿಲ್‌ ಪ್ರತಿಕ್ರಿಯಿಸಿ, ಸ್ಮಾರ್ಟ್ ಸಿಟಿಯಲ್ಲಿ ಆ ರಸ್ತೆಯಲ್ಲಿ ಬಸ್ಸು ನಿಲ್ದಾಣಗಳ ಕಾಮಗಾರಿಯೂ ನಡೆಯಲಿದೆ. ಇದಲ್ಲದೆ, ಎಂಸಿಎಫ್‌ನವರೂ ಬಸ್ಸು ತಂಗುದಾಣ ನಿರ್ಮಿಸಲು ಮಾತನಾಡಿದ್ದಾರೆ ಎಂದು ಹೇಳಿದರು.

ರಾವ್ ಆ್ಯಂಡ್ ರಾವ ವೃತ್ತದ ಬಳಿ ಪ್ರಯಾಣಿಕರಿಗೆ ಬಸ್ಸು ತಂಗುದಾಣ ನಿರ್ಮಿಸಬೇಕು. ಬೆಸೆಂಟ್ ಬಳಿ ಫುಟ್ ಪಾತ್‌ನಲ್ಲಿ ಸ್ಟೀಲ್ ಸಾಮಗ್ರಿಗಳನ್ನು ಹಾಕುವುದನ್ನು ತೆರವುಗೊಳಿಸಬೇಕು. ಕಾನ- ಎಂಆರ್‌ಪಿಎಲ್ ರಸ್ತೆ ದುರಸ್ತಿಗೊಳಿಸಬೇಕು. ಯೆಯ್ಯಾಡಿಯಿಂದ ಬಾರೆಬೈಲ್ ರಸ್ತೆಯ ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕು. ಕಾಟಿಪಳ್ಳ ಎರಡನೆ ಬ್ಲಾಕ್‌ನಲ್ಲಿ ದಾರಿದೀಪಗಳು ಹಾಳಾದರೂ ಅದನ್ನು ಬದಲಿಸುತ್ತಿಲ್ಲ, ಮರೋಳಿ ತಾರೆತೋಟ ಬಳಿ ತ್ಯಾಜ್ಯ ಸಂಗ್ರಹಣೆ ಆಗುತ್ತಿಲ್ಲ, ಕಾವೂರು ಜಂಕ್ಷನ್‌ನಲ್ಲಿ ಬಸ್ಸು ನಿಲ್ದಾಣವಿಲ್ಲ, ಪದವಿನಂಗಡಿಯ ಯೂತ್‌ಕ್ಲಬ್ ಎದುರಿನ ಮನೆಯೊಂದಕ್ಕೆ ಮಳೆ ಮಾರ್ಗದ ನೀರು ಹರಿಯುತ್ತದೆ ಎಂಬ ದೂರು, ಸಮಸ್ಯೆಗಳು ಸಾರ್ವಜನಿಕರಿಂದ ಇಂದು ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ರವೂಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News