ಕೊರಿಯ ವಿರುದ್ಧ ಯುದ್ಧ ಘೋಷಣೆ ಮಾಡಿಲ್ಲ: ಅಮೆರಿಕ
ವಾಶಿಂಗ್ಟನ್, ಸೆ. 26: ಅಮೆರಿಕವು ಉತ್ತರ ಕೊರಿಯದ ವಿರುದ್ಧ ಯುದ್ಧ ಘೋಷಣೆ ಮಾಡಿದೆ ಎಂಬ ಆರೋಪವನ್ನು ಶ್ವೇತಭವನ ‘ಅಸಂಬದ್ಧ’ ಎಂಬುದಾಗಿ ತಳ್ಳಿಹಾಕಿದೆ.
ತನ್ನ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್, ‘‘ಖಂಡಿತ ಇಲ್ಲ. ನಾವು ಉತ್ತರ ಕೊರಿಯ ವಿರುದ್ಧ ಯುದ್ಧ ಘೋಷಣೆ ಮಾಡಿಲ್ಲ. ಸ್ಪಷ್ಟ ಮಾತುಗಳಲ್ಲಿ ಹೇಳುವುದಾದರೆ, ಈ ಕುರಿತ ಆರೋಪವು ಅಸಂಬದ್ಧವಾಗಿದೆ’’ ಎಂದು ಅವರು ಹೇಳಿದರು.
ಅಮೆರಿಕವು ತನ್ನ ದೇಶದ ವಿರುದ್ಧ ಯುದ್ಧ ಸಾರಿದೆ ಎಂಬುದಾಗಿ ಸೋಮವಾರ ನ್ಯೂಯಾರ್ಕ್‌ನಲ್ಲಿದ್ದ ಉತ್ತರ ಕೊರಿಯದ ವಿದೇಶ ಸಚಿವ ರಿ ಯಾಂಗ್ ಹೊ ಹೇಳಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.
ಅದೇ ವೇಳೆ, ಅಮೆರಿಕದ ಬಾಂಬರ್ ವಿಮಾನಗಳನ್ನು ಹೊಡೆದುರುಳಿಸಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ಯಾಂಗ್‌ಯಾಂಗ್ ಸಿದ್ಧವಾಗಿದೆ ಎಂಬುದಾಗಿಯೂ ಯಾಂಗ್ ಹೊ ಘೋಷಿಸಿದರು.
ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾಗವಹಿಸುವುದಕ್ಕಾಗಿ ಉತ್ತರ ಕೊರಿಯದ ವಿದೇಶ ಸಚಿವರು ನ್ಯೂಯಾರ್ಕ್‌ನಲ್ಲಿದ್ದರು.
‘‘ನಮ್ಮ ದೇಶದ ವಿರುದ್ಧ ಮೊದಲು ಯುದ್ಧ ಸಾರಿರುವುದು ಅಮೆರಿಕ ಎಂಬುದನ್ನು ಇಡೀ ಜಗತ್ತು ತಿಳಿದುಕೊಳ್ಳಬೇಕು’’ ಎಂದು ಅವರು ನ್ಯೂಯಾರ್ಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
‘‘ಅಮೆರಿಕವು ನಮ್ಮ ದೇಶದ ವಿರುದ್ಧ ಯುದ್ಧ ಘೋಷಿಸಿರುವುದರಿಂದ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳುವ ಎಲ್ಲ ಹಕ್ಕು ನಮಗಿದೆ. ಇದರ ಪ್ರಕಾರ, ಅಮೆರಿಕದ ಬಾಂಬರ್ ವಿಮಾನಗಳು ನಮ್ಮ ದೇಶದ ವಾಯು ಪ್ರದೇಶದ ಗಡಿಯೊಳಗಿಲ್ಲದಿದ್ದರೂ ಅವುಗಳನ್ನು ಹೊಡೆದುರುಳಿಸುವ ಹಕ್ಕು ನಮಗಿದೆ’’ ಎಂದು ಹೊ ನುಡಿದರು.
ಒಂದು ದೇಶದ ವಿಮಾನವು ಅಂತಾರಾಷ್ಟ್ರೀಯ ಜಲಪ್ರದೇಶದ ಮೇಲಿದ್ದರೆ ಇನ್ನೊಂದು ದೇಶವು ಅದನ್ನು ಹೊಡೆದುರುಳಿಸುವುದು ಸರಿಯಲ್ಲ ಎಂದು ಸ್ಯಾಂಡರ್ಸ್ ಹೇಳಿದರು.