ಟ್ರಂಪ್ ‘ಜಗತ್ತಿನ ಚಕ್ರವರ್ತಿ’ಯಂತೆ ವರ್ತಿಸುತ್ತಿದ್ದಾರೆ!
ವಿಶ್ವಸಂಸ್ಥೆ (ನ್ಯೂಯಾರ್ಕ್), ಸೆ. 26: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಜಗತ್ತಿನ ಚಕ್ರವರ್ತಿ’ಯಂತೆ ವರ್ತಿಸುತ್ತಿದ್ದಾರೆ ಎಂದು ವೆನೆಝೆವೆಲದ ವಿದೇಶ ಸಚಿವ ಜಾರ್ಜ್ ಅರಿಯಾಝ ಸೋಮವಾರ ಆರೋಪಿಸಿದ್ದಾರೆ.
ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ವೆನೆಝುವೆಲವನ್ನು ಕಟು ಮಾತುಗಳಲ್ಲಿ ನಿಂದಿಸಿದ ಟ್ರಂಪ್ ವಿರುದ್ಧ ಅವರು ಈ ರೀತಿಯಾಗಿ ಪ್ರತಿ ದಾಳಿ ನಡೆಸಿದ್ದಾರೆ.
ಟ್ರಂಪ್ ಆಡಳಿತ ಹೊರಡಿಸಿದ ಹೊಸ ಪ್ರಯಾಣ ನಿಷೇಧ ಪಟ್ಟಿಯಲ್ಲಿ ವೆನೆಝುವೆಲವನ್ನು ಸೇರಿಸಿರುವುದು ಹಾಗೂ ಕಳೆದ ವಾರ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾಡಿದ ಭಾಷಣದಲ್ಲಿ ಟ್ರಂಪ್ ವೆನೆಝುವೆಲವನ್ನು ‘ಭ್ರಷ್ಟ ಆಡಳಿತ’ ಎಂಬುದಾಗಿ ಬಣ್ಣಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
‘‘ತಾನೋರ್ವ ಜಗತ್ತಿನ ಚಕ್ರವರ್ತಿಯೆಂಬಂತೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಿಗಾಗಿ ನಿರ್ಮಿಸಿದ ವೇದಿಕೆಯನ್ನು ಯುದ್ಧ ಘೋಷಿಸಲು, ಸದಸ್ಯ ರಾಷ್ಟ್ರಗಳ ಸಂಪೂರ್ಣ ನಿರ್ನಾಮವನ್ನು ಘೋಷಿಸಲು ಬಳಸುತ್ತಾರೆ. ವಿಶ್ವಸಂಸ್ಥೆಯ ಸಾರ್ವಭೌಮ ಸದಸ್ಯ ದೇಶಗಳ ಮೇಲೆ ತನಗೆ ಸರ್ವಾಧಿಕಾರವಿದೆ ಎಂಬ ರೀತಿಯಲ್ಲಿ ಅವರು ವರ್ತಿಸುತ್ತಾರೆ’’ ಎಂದು ಅರಿಯಾಝ ಹೇಳಿದರು.
ಅಮೆರಿಕ ಅಥವಾ ಮಿತ್ರ ದೇಶಗಳನ್ನು ರಕ್ಷಿಸುವ ಅನಿವಾರ್ಯತೆಗೆ ತಾನು ಒಳಗಾದರೆ ಉತ್ತರ ಕೊರಿಯವನ್ನು ‘ಸಂಪೂರ್ಣವಾಗಿ ನಾಶಪಡಿಸುವುದಾಗಿ’ ಟ್ರಂಪ್ ಬೆದರಿಕೆ ಹಾಕಿರುವುದನ್ನು ಸ್ಮರಿಸಹುದಾಗಿದೆ.